ADVERTISEMENT

ನಾಳೆಯಿಂದ ಒಪಿಡಿ ಪುನಾರಂಭ: ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ ಸೇವೆ

​ಪ್ರಜಾವಾಣಿ ವಾರ್ತೆ
Published 30 ಮೇ 2020, 20:41 IST
Last Updated 30 ಮೇ 2020, 20:41 IST
ನಿಮ್ಹಾನ್ಸ್
ನಿಮ್ಹಾನ್ಸ್   

ಬೆಂಗಳೂರು: ಎರಡು ತಿಂಗಳುಗಳಿಂದ ಸ್ಥಗಿತವಾಗಿದ್ದರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್‌) ಹೊರರೋಗಿಗಳ ವಿಭಾಗ (ಒಪಿಡಿ) ಸೋಮವಾರ ಪುನರಾರಂಭವಾಗಲಿದೆ. ಆದರೆ, ಮುಂಚಿತವಾಗಿ ನೋಂದಣಿ ಮಾಡಿಕೊಂಡ ರೋಗಿಗಳಿಗೆ ಮಾತ್ರ ಸೇವೆ ದೊರೆಯಲಿದೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದ ಬೆನ್ನಲ್ಲಿಯೇ ಸರ್ಕಾರ ಲಾಕ್‌ ಡೌನ್‌ ಘೋಷಿಸಿ, ಕೋವಿಡೇತರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗಳಲ್ಲಿ ಒಪಿಡಿ ಸ್ಥಗಿತ ಮಾಡುವಂತೆ ಸೂಚಿಸಿತ್ತು. ಅದೇ ರೀತಿ, ಚೇತರಿಸಿಕೊಂಡ ರೋಗಿಗಳನ್ನು ಮನೆಗೆ ಕಳುಹಿಸಿ, ತುರ್ತಾಗಿ ಚಿಕಿತ್ಸೆ ಅಗತ್ಯ ಇರುವವರಿಗೆ ಮಾತ್ರ ಸೇವೆ ನೀಡಲು ನಿರ್ದೇಶನ ನೀಡಿತ್ತು. ಹೀಗಾಗಿ ನಿಮ್ಹಾನ್ಸ್ಮಾರ್ಚ್‌ 26ರಿಂದ ಒಪಿಡಿಯನ್ನು ಸ್ಥಗಿತಗೊಳಿಸಿತ್ತು. ಈ ಆಸ್ಪತ್ರೆಯನ್ನೇ ನೆಚ್ಚಿಕೊಂಡಿದ್ದ ಮಾನಸಿಕ ರೋಗಿಗಳು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಲಾಕ್‌ ಡೌನ್‌ ಸಡಿಲಿಸಿದ ಪರಿಣಾಮ ನಿಮ್ಹಾನ್ಸ್‌ ಒಪಿಡಿ ಆರಂಭಿಸಲು ನಿರ್ಧರಿಸಿದೆ.

ಅಗತ್ಯ ಮುಂಜಾಗರೂಕತೆ: ‘ರೋಗಿಗಳ ದಟ್ಟಣೆ ಉಂಟಾಗದಂತೆ ನೋಡಿಕೊಂಡು ಚಿಕಿತ್ಸೆ ನೀಡಬೇಕಾಗಿದೆ. ಹಾಗಾಗಿ ಒಪಿಡಿ ಆರಂಭಿಸಿದರೂ ಸೀಮಿತ ಸಂಖ್ಯೆಯ ರೋಗಿಗಳಿಗೆ ಸೇವೆ ನೀಡಲಾಗುತ್ತದೆ. ಸಂಸ್ಥೆಗೆ ಬರುವ ಮೊದಲು ಐವಿಆರ್‌ಎಸ್ ಮೂಲಕ ಸಂಭಾಷಣೆ ನಡೆಸಿ (080 26991699), ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಸಂಸ್ಥೆಯಿಂದಲೇ ವ್ಯಕ್ತಿಯನ್ನು ಸಂಪರ್ಕಿಸಿ, ಸಮಸ್ಯೆಯ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ. ಸಂಸ್ಥೆಗೆ ಬರುವುದು ಅಗತ್ಯವಿದ್ದಲ್ಲಿ ನಾವೇ ಸೂಚಿಸುತ್ತೇವೆ. ಪ್ರತಿಯೊಬ್ಬರೂ ಈ ಪ್ರಕ್ರಿಯೆ ಪೂರೈಸಿಯೇ ಸೇವೆ ಪಡೆಯಬೇಕು’ ಎಂದು ನಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್. ಗಂಗಾಧರ್ ತಿಳಿಸಿದರು.

ADVERTISEMENT

‘ತುರ್ತಾಗಿ ಚಿಕಿತ್ಸೆ ಅಗತ್ಯ ಇಲ್ಲದಿದ್ದವರು ಸಂಸ್ಥೆಗೆ ಬರದಿದ್ದರೆ ಒಳ್ಳೆಯದು. ಈ ಹಿಂದೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳು ಮಾತ್ರ ಐವಿಆರ್‌ಎಸ್ ಮೂಲಕ ನೋಂದಣಿ ಮಾಡಿಕೊಳ್ಳಬೇಕಾಗಿತ್ತು. ಈಗ ಎಲ್ಲ ಹೊರರೋಗಿಗಳು ಈ ವ್ಯವಸ್ಥೆಗೆ ಒಳಪಡಬೇಕು. ತಮ್ಮ ಸರದಿಗಾಗಿ ಕಾಯಲು ಸಂಸ್ಥೆಯಲ್ಲಿ ಆಶ್ರಯ ತಾಣಗಳನ್ನು ನಿರ್ಮಿಸಲಾಗುತ್ತಿದೆ’ ಎಂದರು.

2.7ಲಕ್ಷ ದೂರವಾಣಿ ಕರೆ
ಲಾಕ್‌ ಡೌನ್‌ ಪರಿಣಾಮ ಮಾನಸಿಕ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ನಿಮ್ಹಾನ್ಸ್ ಪ್ರತ್ಯೇಕ ಸಹಾಯವಾಣಿಯನ್ನು ಪ್ರಾರಂಭಿಸಿ, ಸಮಸ್ಯೆಗಳಿಗೆ ತಜ್ಞರಿಂದ ಪರಿಹಾರ ಒದಗಿಸುವ ಪ್ರಯತ್ನವನ್ನೂ ಮಾಡಿತ್ತು. ಈ ಸೇವೆ ಈಗಲೂ ಮುಂದುವರಿಯುತ್ತಿದ್ದು, 2.7 ಲಕ್ಷ ದೂರವಾಣಿ ಕರೆಗಳು ಬಂದಿವೆ. ಅದರಲ್ಲಿ 45 ಸಾವಿರ ಕರೆಗಳು ಮನೋವೈದ್ಯಶಾಸ್ತ್ರ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿವೆ.

**
ತುರ್ತು ಚಿಕಿತ್ಸೆಗಳಿಗೆ ನೋಂದಣಿ ಮಾಡಬೇಕಾದ ಅಗತ್ಯವಿಲ್ಲ. ಹೊರ ರೋಗಿಗಳಿಗೆ ಸಮಸ್ಯೆಯಾಗದಂತೆ ಸೇವೆ ನೀಡಲು ಅಗತ್ಯ ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
-ಡಾ.ಬಿ.ಎನ್. ಗಂಗಾಧರ್, ನಿಮ್ಹಾನ್ಸ್ ನಿರ್ದೇಶಕ

**

ಮಾಹಿತಿಗೆ: ಐವಿಆರ್‌ಎಸ್ ಸಂಪರ್ಕ ಸಂಖ್ಯೆ – 080 26991699

ನಿಮ್ಹಾನ್ಸ್ ಸಹಾಯವಾಣಿ –080 4611 0007

ಅಂಕಿ ಅಂಶ

225:ನಿಮ್ಹಾನ್ಸ್‌ನಲ್ಲಿರುವ ವೈದ್ಯರು

950:ಆಸ್ಪತ್ರೆಯಲ್ಲಿರುವ ಹಾಸಿಗೆಗಳ ಸಂಖ್ಯೆ

850:ನಿಮ್ಹಾನ್ಸ್‌ನಲ್ಲಿರುವ ಶುಶ್ರೂಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.