ADVERTISEMENT

ರೌಡಿ ಚಟುವಟಿಕೆ ವಿರುದ್ಧ ಕಾರ್ಯಾಚರಣೆ: ನೂತನ ಪೊಲೀಸ್‌ ಕಮಿಷನರ್‌ ಬಿ.ದಯಾನಂದ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 0:13 IST
Last Updated 1 ಜೂನ್ 2023, 0:13 IST
ನಿರ್ಗಮಿತ ನಗರ ಪೊಲೀಸ್‌ ಕಮಿಷನರ್‌ ಪ್ರತಾಪ್‌ ರೆಡ್ಡಿ ಅವರಿಂದ ನೂತನ ಪೊಲೀಸ್‌ ಕಮಿಷನರ್‌ ಬಿ.ದಯಾನಂದ್ ಅವರು (ಎಡಬದಿ) ಅಧಿಕಾರ ಸ್ವೀಕರಿಸಿದರು. – ಪ್ರಜಾವಾಣಿ ಚಿತ್ರ
ನಿರ್ಗಮಿತ ನಗರ ಪೊಲೀಸ್‌ ಕಮಿಷನರ್‌ ಪ್ರತಾಪ್‌ ರೆಡ್ಡಿ ಅವರಿಂದ ನೂತನ ಪೊಲೀಸ್‌ ಕಮಿಷನರ್‌ ಬಿ.ದಯಾನಂದ್ ಅವರು (ಎಡಬದಿ) ಅಧಿಕಾರ ಸ್ವೀಕರಿಸಿದರು. – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಗರದಲ್ಲಿರುವ ರೌಡಿಗಳು ರಿಯಲ್ ಎಸ್ಟೇಟ್ ಉದ್ಯಮಕ್ಕೂ ಕೈಹಾಕಿದ್ದಾರೆ. ಉದ್ಯಮಿಗಳನ್ನು ಬೆದರಿಸಿ ಸುಲಿಗೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಹಕಾರದಲ್ಲಿ ರೌಡಿ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗುವುದು’ ಎಂದು ನೂತನ ಪೊಲೀಸ್‌ ಕಮಿಷನರ್‌ ಬಿ. ದಯಾನಂದ್ ಭರವಸೆ ನೀಡಿದರು.

ನಗರದಲ್ಲಿ ಬುಧವಾರ ನಿರ್ಗಮಿತ ಪೊಲೀಸ್ ಕಮಿಷನರ್‌ ಪ್ರತಾಪ್‌ ರೆಡ್ಡಿ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ರೌಡಿ ಚಟುವಟಿಕೆ ಹತ್ತಿಕ್ಕಲು ಪೊಲೀಸ್‌ ಇಲಾಖೆ ಸನ್ನದ್ಧವಾಗಿದೆ. ರೌಡಿ ಚಟುವಟಿಕೆ ವಿರುದ್ಧದ ಕಾರ್ಯಾಚರಣೆಗೆ ಸಿಸಿಬಿ ಘಟಕವಿದೆ. ಅಲ್ಲಿಯೂ ಸಮರ್ಥ ಅಧಿಕಾರಿಗಳ ಪಡೆಯೇ ಇದ್ದು ಅವರನ್ನು ಬಳಸಿಕೊಂಡು ನಿರಂತರ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಹೇಳಿದರು.

ADVERTISEMENT

‘ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಸೈಬರ್‌ ಅಪರಾಧ ತಡೆಗಟ್ಟಲು ಬ್ಯಾಂಕ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಸಹಕಾರ ಅಗತ್ಯ. ಈ ಪ್ರಕರಣಗಳನ್ನು ತಗ್ಗಿಸಲು ವಿಶೇಷ ಪ್ರಯತ್ನ ವಹಿಸಲಾಗುವುದು’ ಎಂದು ಹೇಳಿದರು.

‘ನಗರದ ಸಂಚಾರ ನಿರ್ವಹಣೆಯೂ ಸವಾಲಿನಿಂದ ಕೂಡಿದೆ. ಸಂಚಾರ ದಟ್ಟಣೆ ತಗ್ಗಿಸಲು ಬರೀ ಪೊಲೀಸ್ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಇಲಾಖೆಯ ಜೊತೆಗೆ ಬಿಬಿಎಂಪಿ ಸೇರಿದಂತೆ ನಾಗರಿಕರ ಸಹಕಾರ ಅಗತ್ಯ’ ಎಂದು ಪ್ರತಿಪಾದಿಸಿದರು.

‘ಗುಪ್ತಚರ ಇಲಾಖೆ ಪೊಲೀಸ್ ವ್ಯವಸ್ಥೆಯ ಬೆನ್ನೆಲುಬು. ಭಯೋತ್ಪಾದನೆ, ಸೈಬರ್ ಅಪರಾಧ, ಭೂಗತ ಚಟುವಟಿಕೆ ನಿಯಂತ್ರಿಸುವುದರಲ್ಲಿ ಗುಪ್ತಚರ ಇಲಾಖೆ ಪಾತ್ರ ದೊಡ್ಡದಿದೆ. ನಗರದಲ್ಲಿ ಭಯೋತ್ಪಾದಕ ನಿಗ್ರಹ ದಳದ ಘಟಕ ಇದೆ. ಅದನ್ನು ಇನ್ನಷ್ಟು ಬಲಪಡಿಸುತ್ತೇವೆ’ ಎಂದು ಹೇಳಿದರು.

‘ಸರ್ಕಾರವು ಬೆಂಗಳೂರು ಪೊಲೀಸ್ ಕಮಿಷನರ್‌ ಆಗಿ ಕೆಲಸ ಮಾಡಲು ಅವಕಾಶ ಕಲ್ಪಿಸಿದೆ. ನಗರದ ಜನರೂ ಪೊಲೀಸ್ ಇಲಾಖೆ ಮೇಲೆ ಹೆಚ್ಚಿನ ವಿಶ್ವಾಸ, ನಂಬಿಕೆ ಇಟ್ಟುಕೊಂಡಿದ್ದಾರೆ. ಆ ನಂಬಿಕೆ, ವಿಶ್ವಾಸಕ್ಕೆ ಚ್ಯುತಿಬಾರದಂತೆ ಕೆಲಸ ನಿರ್ವಹಿಸುತ್ತೇನೆ’ ಎಂದು ದಯಾನಂದ್ ಹೇಳಿದರು.

ಸಂಚಾರ ವಿಭಾಗದ ಸುಧಾರಣೆಗೆ ಸಿಬ್ಬಂದಿ ಸಲಹೆ ಪಡೆದು ತೀರ್ಮಾನ ತೆಗೆದುಕೊಳ್ಳಲಾಗುವುದು. ಟೋಯಿಂಗ್ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ.
ಬಿ.ದಯಾನಂದ್‌ ನಗರ ಪೊಲೀಸ್‌ ಕಮಿಷನರ್‌

‘ಜನ ಸ್ನೇಹಿ ಪೊಲೀಸ್ ವ್ಯವಸ್ಥೆಯೇ ಗುರಿ’

‘ಅಪರಾಧ ಪ್ರಕರಣಗಳ ಪತ್ತೆಗೆ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಜತೆಗೆ ಜನ ಸ್ನೇಹಿ ಪೊಲೀಸ್ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುತ್ತೇನೆ’ ಎಂದು ಬಿ.ದಯಾನಂದ್ ಹೇಳಿದರು. ‘ಬೆಂಗಳೂರು ನಗರದಲ್ಲಿಯೇ ನಾನು ಹುಟ್ಟಿ ಬೆಳೆದಿದ್ದು. ಇಲ್ಲಿನ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವಿದೆ. ನಗರದಲ್ಲಿ ಸಾಕಷ್ಟು ಸವಾಲುಗಳಿದ್ದು ಇವುಗಳನ್ನು ಇಲಾಖೆಯ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಬಗೆಹರಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.