ADVERTISEMENT

ಬೆಂಗಳೂರು: 368 ಮರಗಳ ತೆರವುಗೊಳಿಸುವ ರೈಲ್ವೆ ಇಲಾಖೆ ನಿರ್ಧಾರಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 23:32 IST
Last Updated 28 ಏಪ್ರಿಲ್ 2025, 23:32 IST
<div class="paragraphs"><p>ಭಾರತೀಯ ರೈಲ್ವೆ</p></div>

ಭಾರತೀಯ ರೈಲ್ವೆ

   

ಬೆಂಗಳೂರು: ವಸಂತನಗರದಲ್ಲಿರುವ ದಂಡು ಪ್ರದೇಶದ ಬಳಿಯ ರೈಲ್ವೆ ಕಾಲೊನಿಯಲ್ಲಿ ವಾಣಿಜ್ಯ ಕೇಂದ್ರ ಅಭಿವೃದ್ಧಿಗೆ 368 ಮರ ತೆರವುಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿರುವುದಕ್ಕೆ ಪರಿಸರ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ.

‘ಬೆಂಗಳೂರಿನ ತಂಪು ವಾತಾವರಣಕ್ಕೆ ಕಾರಣವಾಗಿರುವ ಬೃಹತ್ ಮರಗಳು ನೂರಾರು ಪಕ್ಷಿಗಳಿಗೆ, ಸಾವಿರಾರು ಸೂಕ್ಷ್ಮ ಜೀವಿಗಳಿಗೆ ಆಶ್ರಯ ತಾಣವಾಗಿದೆ. ಈ ಮರಗಳನ್ನು ಕಡಿಯುವುದರಿಂದ ಈ ಪಕ್ಷಿಸಂಕುಲ ಮತ್ತು ಇತರ ಸೂಕ್ಷ್ಮ ಜೀವಿಗಳು ನೆಲೆ ಕಳೆದುಕೊಳ್ಳುತ್ತವೆ. ಬೆಂಗಳೂರಿನ ನಾಗರಿಕರಷ್ಟೇ ಅಲ್ಲದೇ ಪರಿಸರದ ಸಮತೋಲನದ ಪರವಾಗಿರುವವರೆಲ್ಲರೂ ಈ ಪರಿಸರ ವಿರೋಧಿ ಕ್ರಮವನ್ನು ಬಲವಾಗಿ ವಿರೋಧಿಸುತ್ತೇವೆ‌’ ಎಂದು ‘ಪರಿಸರಕ್ಕಾಗಿ ನಾವು ಸಂಘಟನೆ’ಯ ಸದಸ್ಯರು ಹೇಳಿದ್ದಾರೆ.

ADVERTISEMENT

‘ಕಂಟೊನ್ಮೆಂಟ್‌ ರೈಲ್ವೇಸ್‌ ಕಾಲೊನಿ ಆವರಣದಲ್ಲಿ ‘ವಾಣಿಜ್ಯ ಅಭಿವೃದ್ಧಿ ಯೋಜನೆಗಾಗಿ‘ 368 ಮರಗಳನ್ನು ತೆರವುಗೊಳಿಸಲಾಗುತ್ತಿದೆ. ನಾಗರಿಕರು 10 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಬಹುದು’ ಎಂದು ಬಿಬಿಎಂಪಿ ಅರಣ್ಯ ವಿಭಾಗ ಏ. 25ರಂದು ಪ್ರಕಟಣೆ ಹೊರಡಿಸಿದೆ.

‘ರೈಲು ಹಳಿ ಅಭಿವೃದ್ಧಿ ಹಾಗೂ ವಿಸ್ತರಣೆ ಕಾಮಗಾರಿಗಳಿಗಾಗಿ ಕಂಟೋನ್ಮೆಂಟ್‌ ರೈಲು ನಿಲ್ದಾಣ ಸುತ್ತಮತ್ತ ಮರಗಳನ್ನು ತೆರವು ಮಾಡಲು ಬಿಬಿಎಂಪಿಯಿಂದ ಅನುಮತಿ ಕೇಳಲಾಗಿದೆ. ತೆರವುಗೊಳಿಸಲಾಗುವ ಮರಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸಲಾಗುವುದು’ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.