ADVERTISEMENT

ಬೆಂಗಳೂರು | ರಸ್ತೆ ಅಗಲ ಕಿರಿದುಗೊಳಿಸುವ ಯೋಜನೆಗೆ ವಿರೋಧ: ಪ್ರತಿಭಟನೆ

ಕನಕಪುರ ರಸ್ತೆ ಸಮೀಪದ ನಿವಾಸಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 15:47 IST
Last Updated 14 ಜುಲೈ 2024, 15:47 IST
ಕನಕಪುರ ರಸ್ತೆಯ ಒಂದು ಪಥವನ್ನು ಖಾಸಗಿ ವಾಣಿಜ್ಯ ಸಂಸ್ಥೆಗಳಿಗೆ ವಾಹನ ನಿಲುಗಡೆಗಾಗಿ ಮೀಸಲಿಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ‘ಕರಮೋಕ್’ ಬ್ಯಾನರ್ ಅಡಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ಕನಕಪುರ ರಸ್ತೆಯ ಒಂದು ಪಥವನ್ನು ಖಾಸಗಿ ವಾಣಿಜ್ಯ ಸಂಸ್ಥೆಗಳಿಗೆ ವಾಹನ ನಿಲುಗಡೆಗಾಗಿ ಮೀಸಲಿಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ‘ಕರಮೋಕ್’ ಬ್ಯಾನರ್ ಅಡಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.   

ಬೆಂಗಳೂರು: ಕನಕಪುರ ರಸ್ತೆಯು ಮೂರು ಪಥಗಳನ್ನು ಹೊಂದಿದ್ದು, ಅದರಲ್ಲಿ ಒಂದು ಪಥ ಬಂದ್‌ ಮಾಡಿ ಖಾಸಗಿ ವಾಣಿಜ್ಯ ಸಂಸ್ಥೆಗಳಿಗೆ ವಾಹನಗಳ ನಿಲುಗಡೆಗೆ ಜಾಗ ನೀಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ‘ಕನಕಪುರ ರೋಡ್‌ ಅಪಾರ್ಟ್‌ಮೆಂಟ್ಸ್‌ ಮೂವ್‌ಮೆಂಟ್‌ ಆಫ್‌ ಚೇಂಜ್‌’ (ಕರಮೋಕ್‌) ಹೆಸರಿನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಕನಕಪುರ ರಸ್ತೆಯನ್ನು ‘ಹೈ ಡೆನ್ಸಿಟಿ ಕಾರಿಡಾರ್’ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಉದ್ದೇಶಪೂರ್ವಕವಾಗಿಯೇ ಬಿಬಿಎಂಪಿ ಒಂದು ಪಥ ಕಡಿಮೆ ಮಾಡುತ್ತಿದೆ. ಈ ರಸ್ತೆಯ ಇಕ್ಕೆಲಗಳಲ್ಲಿ ದೊಡ್ಡ ವಾಣಿಜ್ಯ ಸಂಸ್ಥೆಗಳಿದ್ದು, ಅವುಗಳಿಗೆ ವಾಹನ ನಿಲುಗಡೆಗೆ ಅನುಕೂಲ ಮಾಡಿಕೊಡಲು ಈ ಕ್ರಮ ಕೈಗೊಂಡಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಬಿಬಿಎಂಪಿಯ ಟ್ರಾಫಿಕ್‌ ಎಂಜಿನಿಯರಿಂಗ್‌ ಸೆಲ್‌ಗೆ ಮತ್ತು ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಿಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಗತ್ಯ ಇರುವಷ್ಟು ವಾಹನಗಳ ನಿಲುಗಡೆ ಪ್ರದೇಶ ಹೊಂದಿರದ ಕಾರ್‌ ಶೋರೂಂಗಳ ಸಹಿತ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ದೂರಿದರು.

ADVERTISEMENT

ಈ ರಸ್ತೆಯಲ್ಲಿ ಶೂನ್ಯ ನಿಲುಗಡೆ ಇರಬೇಕು. ವಾಹನ ನಿಲುಗಡೆಗೆ ಅವಕಾಶ ನೀಡಬಾರದು ಎಂದು ರಾಜ್ಯ ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳು ನಿಯಮ ಪಾಲಿಸುತ್ತಿಲ್ಲ. ವಾಣಿಜ್ಯ ಸಂಸ್ಥೆಗಳು ಅವರ ಗ್ರಾಹಕರ ವಾಹನಗಳ ನಿಲುಗಡೆಗೆ ಕಟ್ಟಡದ ನೆಲ ಮಹಡಿಯಲ್ಲಿ ಅಥವಾ ಬೇರೆ ಕಡೆ ವ್ಯವಸ್ಥೆ ಮಾಡಿಕೊಳ್ಳಬೇಕು. ಬಿಬಿಎಂಪಿ ಉಚಿತವಾಗಿ ವಾಹನ ನಿಲುಗಡೆ ಸೌಲಭ್ಯ ನೀಡಬಾರದು ಎಂದು ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ. ಮೊದಲೇ ವಾಹನದಟ್ಟಣೆ ಹೆಚ್ಚಿರುವ ಈ ರಸ್ತೆಯನ್ನು ಇನ್ನಷ್ಟು ಕಿರಿದು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕನಕಪುರ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬಾರದು. ವಾಹನ ಸಂಚಾರಕ್ಕೆ ಏಕರೂಪದ ಮೂರು ಪಥಗಳು ಇರಬೇಕು. ಕಾಲುದಾರಿಗಳಿಗೆ ಅವಕಾಶ ನೀಡಬೇಕು. ಪಾದಚಾರಿ ಮಾರ್ಗ ಒತ್ತುವರಿಯಾಗದಂತೆ ತಡೆಯಬೇಕು ಎಂದು ಆಗ್ರಹಿಸಿದರು.

ಕೇಸರಿ ಪ್ರಸಾದ್‌, ಅಬ್ದುಲ್‌ ಅಲೀಮ್‌ ಸಹಿತ ಸ್ಥಳೀಯರು ‘ಕರಮೋಕ್’ ಬ್ಯಾನರ್ ಅಡಿಯಲ್ಲಿ ಪ್ರತಿಭಟನೆ, ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.