ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿ ನೆಡಲಾಗಿರುವ ಮರಗಳ ಸುತ್ತ ಕನಿಷ್ಠ ಒಂದು ಮೀಟರ್ ಸುತ್ತಳತೆಯಲ್ಲಿ ಹಾಕಲಾಗಿರುವ ಕಾಂಕ್ರೀಟ್, ಕಲ್ಲು ಮತ್ತು ಸಿಮೆಂಟ್ ಬ್ಲಾಕ್‌ಗಳನ್ನು ತೆರವುಗೊಳಿಸಲು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಆದೇಶಿಸಿದ್ದಾರೆ.
ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಆದೇಶದ ಅನ್ವಯ ಅವರು ಈ ಆದೇಶ ಹೊರಡಿಸಿದ್ದಾರೆ.
‘ಪ್ರಸ್ತುತ ರಸ್ತೆಗಳಲ್ಲಿರುವ ಮರಗಳ ಬುಡಗಳಿಗೆ ಕಾಂಕ್ರೀಟ್, ಡಾಂಬರು ಅಥವಾ ಇಂಟರ್‌ಲಾಕ್ ಪೇವರ್‌ಗಳಿಂದ ಮುಚ್ಚಲಾಗುತ್ತಿದೆ. ಇದರಿಂದ ಮರಗಳ ಆರೋಗ್ಯಕರ ಬೆಳವಣಿಗೆ, ಬದುಕುಳಿಯುವಿಕೆ ಮೇಲೆ ದುಷ್ಪರಿಣಾಮ ಬೀರಿದ್ದು, ಗಾಳಿಗೆ ತಡೆ, ನೀರಿನ ಒಳಹರಿವು ಬೇರುಗಳ ಪೋಷಣೆ ಮೇಲೆ ಪರಿಣಾಮ ಬೀರುತ್ತಿದೆ.
‘ರಸ್ತೆ ಬದಿಯ ಮರಗಳ ಸುತ್ತ ಜಾಗವಿಲ್ಲದೆ, ಬೇರು ಆಳಕ್ಕೆ ಇಳಿಯದೆ, ಮಳೆ, ಗಾಳಿಗೆ ಬಿದ್ದು ಪ್ರಾಣ ಹಾನಿ, ಆಸ್ತಿ ಹಾನಿಯಾವುದನ್ನು ತಪ್ಪಿಸಬೇಕು. ಜತೆಗೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) 2025ರ ಮೇ 21ರಂದು ನೀಡಿರುವ ನಿರ್ದೇಶನಗಳನ್ವಯ ಮರಗಳ ಸುತ್ತ ಕನಿಷ್ಠ ಒಂದು ಮೀಟರ್ ಜಾಗ ಬಿಡಬೇಕು. ಆದ್ದರಿಂದ ಎಲ್ಲ ರೀತಿಯ ನಿರ್ಮಾಣಗಳನ್ನು ತೆರವುಗೊಳಿಸಬೇಕು.
‘ಪಾಲಿಕೆ ವ್ಯಾಪ್ತಿಯಲ್ಲಿ ಮರಗಳ ಬೇರಿನ ವ್ಯವಸ್ಥೆಗೆ ಹಾನಿಯಾಗದಂತೆ ತಡೆಯಲು, ಪಾದಚಾರಿ ಮಾರ್ಗಗಳು ಅಥವಾ ರಸ್ತೆಗಳನ್ನು ನಿರ್ಮಿಸುವಾಗ, ಬೇರುಗಳಿಗೆ ನೀರು ಹೋಗುವಂತೆ ಮಾಡಲು ಮರಗಳ ಬುಡದ ಸುತ್ತಲೂ ಸಾಧ್ಯವಾದಲ್ಲೆಲ್ಲಾ ಒಂದು ಮೀಟರ್ ಪ್ರದೇಶವನ್ನು ಬಿಡಬೇಕು. ಆ ಪ್ರದೇಶವನ್ನು ಮಣ್ಣಿನಿಂದ ಸಮತಟ್ಟು ಮಾಡಬೇಕು ಮತ್ತು ಸಾಧ್ಯವಾದಲ್ಲೆಲ್ಲಾ ಹುಲ್ಲನ್ನು ಬೆಳೆಸಬಹುದು. ರಸ್ತೆಗಳು ಅಥವಾ ಮಾರ್ಗಗಳ ಮಧ್ಯದ ಅಂಚಿನಲ್ಲಿ ಕಾಂಕ್ರೀಟ್ ಹಾಕುವುದನ್ನು ತಕ್ಷಣದಿಂದ ನಿಲ್ಲಿಸಬೇಕು’ ಎಂದು ಪ್ರೀತಿ ಗೆಹ್ಲೋಟ್ ಆದೇಶದಲ್ಲಿ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.