ADVERTISEMENT

ಬೆಂಗಳೂರು: ಕ್ಯಾಬ್ ಚಾಲಕನ ಅಂಗಾಂಗ ದಾನ- ಐವರ ಬಾಳಲ್ಲಿ ಬೆಳಕು

ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲುವಿನ ಕ್ಯಾಬ್ ಚಾಲಕ ಮದನ್ ಕುಮಾರ್ (22)

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2023, 14:15 IST
Last Updated 30 ಸೆಪ್ಟೆಂಬರ್ 2023, 14:15 IST
<div class="paragraphs"><p>ಮದನ್ ಕುಮಾರ್</p></div>

ಮದನ್ ಕುಮಾರ್

   

ಬೆಂಗಳೂರು: ರಸ್ತೆ ಅಪಘಾತದಿಂದ ಗಂಭೀರ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲುವಿನ ಕ್ಯಾಬ್ ಚಾಲಕ ಮದನ್ ಕುಮಾರ್ (22) ಅವರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಇದರಿಂದ ಐವರಿಗೆ ನೆರವಾಗಿದೆ.

ಮದನ್ ಕುಮಾರ್ ಅವರು ಸೆ.24ರಂದು ರಾತ್ರಿ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿ, ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ದಾಬಸ್ ಪೇಟೆ ಬಳಿ ರಸ್ತೆ ಅಪಘಾತಕ್ಕೊಳಗಾಗಿದ್ದರು. ಹತ್ತಿರದ ವಿ-ಕೇರ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ, ಬಳಿಕ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ರಾತ್ರಿ 10.30ಕ್ಕೆ ಯಶವಂತಪುರದ ಸ್ಪರ್ಶ್ ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯಕೀಯ ತಂಡದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ವ್ಯಕ್ತಿ ಚೇತರಿಸಿಕೊಳ್ಳದಿದ್ದರಿಂದ ಮೂರು ದಿನಗಳ ಬಳಿಕ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿದರು. ‌

ADVERTISEMENT

‘ನೋವಿನ ನಡುವೆಯೂ ಕುಟುಂಬದ ಸದಸ್ಯರು ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದರು. ಈ ಪ್ರಕರಣವು ನಿಸ್ವಾರ್ಥ ಮನೋಭಾವಕ್ಕೆ ಸ್ಪಷ್ಟ ಉದಾಹರಣೆ. ಮದನ್ ಅವರ ಯಕೃತ್ತು ಮತ್ತು ಎಡ ಮೂತ್ರಪಿಂಡವನ್ನು ಆಸ್ಪತ್ರೆಯಲ್ಲಿಯೇ ಯಶಸ್ವಿಯಾಗಿ ಕಸಿ ಮಾಡಲಾಯಿತು. ಅವರ ಬಲ ಮೂತ್ರಪಿಂಡವನ್ನು ಮಣಿಪಾಲ್ ಆಸ್ಪತ್ರೆಗೆ, ಹೃದಯವನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ಮತ್ತು ಕಣ್ಣಿನ ಕಾರ್ನಿಯಾವನ್ನು ನಾರಾಯಣ ನೇತ್ರಾಲಯಕ್ಕೆ ದಾನವಾಗಿ ನೀಡಲಾಯಿತು’ ಎಂದು ಸ್ಪರ್ಶ್ ಆಸ್ಪತ್ರೆ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್ ಪಸಂಗಾ ತಿಳಿಸಿದ್ದಾರೆ

‘ಅಂಗಾಂಗ ದಾನದ ಬಗ್ಗೆ ಜನಜಾಗೃತಿ ಮೂಡಿಸಿ, ದಾನಿಗಳಾಗಿ ಮುಂದೆ ಬರುವಂತೆ ಪ್ರೋತ್ಸಾಹಿಸುವ ತುರ್ತು ಅಗತ್ಯವಿದೆ. ಮಿದುಳು ನಿಷ್ಕ್ರಿಯಗೊಂಡ ಬಳಿಕ ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ಅಂಗಾಂಗವನ್ನು ದಾನವಾಗಿ ಪಡೆಯಲಾಗುತ್ತದೆ. ಅಂಗಾಂಗ ದಾನಕ್ಕೆ ವಯಸ್ಸಿನ ಮಿತಿಯಿಲ್ಲ’ ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.