ADVERTISEMENT

ಬೆಂಗಳೂರು: ಅಂಗಾಂಗ ಕಸಿಗೆ ಮತ್ತಷ್ಟು ಆಸ್ಪತ್ರೆ ಅಣಿ

ಜೀವಸಾರ್ಥಕತೆಯಡಿ ಕಸಿಗೆ ಅನುಮೋದನೆ ಪಡೆದ ಆಸ್ಪತ್ರೆಗಳ ಸಂಖ್ಯೆ 84ಕ್ಕೆ ಏರಿಕೆ

ವರುಣ ಹೆಗಡೆ
Published 31 ಅಕ್ಟೋಬರ್ 2025, 21:38 IST
Last Updated 31 ಅಕ್ಟೋಬರ್ 2025, 21:38 IST
.
.   

ಬೆಂಗಳೂರು: ಅಂಗಾಂಗ ಕಸಿಗೆ ಉತ್ತೇಜನ ನೀಡಲು ಹಾಗೂ ಕಸಿ ಶಸ್ತ್ರಚಿಕಿತ್ಸೆ ಕಾಯುವಿಕೆ ಅವಧಿ ಕಡಿತಗೊಳಿಸಲು ಖಾಸಗಿ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯ ಹಾಗೂ ಅಗತ್ಯ ವ್ಯವಸ್ಥೆಯನ್ನು ಪರಿಶೀಲಿಸಿ, ಕಸಿ ಶಸ್ತ್ರಚಿಕಿತ್ಸೆಗೆ ಅವಕಾಶ ನೀಡಲಾಗುತ್ತಿದೆ.

ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯು (ಜೀವಸಾರ್ಥಕತೆ) ಅಂಗಾಂಗ ಹಾಗೂ ಅಂಗಾಂಶವನ್ನು ಸಂಗ್ರಹಿಸಿ, ಅಂಗಾಂಗ ವೈಫಲ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಕಸಿ ಮಾಡಿಸಲು ನೆರವಾಗುತ್ತಿದೆ. ಇಲಾಖೆ ರಚಿಸಿದ ತಜ್ಞರ ಸಮಿತಿಯು ಆಸ್ಪತ್ರೆಯಲ್ಲಿನ ಮೂಲಸೌಕರ್ಯ ಹಾಗೂ ವ್ಯವಸ್ಥೆಯನ್ನು ಪರಿಶೀಲಿಸಿ, ಜೀವಸಾರ್ಥಕತೆ ಯೋಜನೆಯಡಿ ಅಂಗಾಂಗ ಕಸಿಗೆ ಮಾನ್ಯತೆ ನೀಡಲು ಶಿಫಾರಸು ಮಾಡುತ್ತಿವೆ.

ಕಸಿ ಶಸ್ತ್ರಚಿಕಿತ್ಸೆಗೆ ಅರ್ಜಿ ಸಲ್ಲಿಸಿದ್ದ ಆಸ್ಪತ್ರೆಗಳಲ್ಲಿ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಸ್ಪರ್ಶ್ ಆಸ್ಪತ್ರೆ ಹಾಗೂ ಮಹದೇವಪುರದಲ್ಲಿರುವ ಕಿಮ್ಸ್ ಆಸ್ಪತ್ರೆ ಇದೇ ಅಕ್ಟೋಬರ್‌ನಲ್ಲಿ ಮಾನ್ಯತೆ ಪಡೆದಿವೆ. ಇದರಿಂದಾಗಿ ಜೀವಸಾರ್ಥಕತೆಯಡಿ ಅಂಗಾಂಗ ಕಸಿಗೆ ಮಾನ್ಯತೆ ಪಡೆದ ಒಟ್ಟು ಆಸ್ಪತ್ರೆಗಳ ಸಂಖ್ಯೆ 84ಕ್ಕೆ ಏರಿಕೆಯಾಗಿದೆ. ಈ ಆಸ್ಪತ್ರೆಗಳಲ್ಲಿ 50ಕ್ಕೂ ಅಧಿಕ ಆಸ್ಪತ್ರೆಗಳು ಬೆಂಗಳೂರಿನಲ್ಲಿಯೇ ಇವೆ. 

ADVERTISEMENT

ದರ ನಿಗದಿ: ಆಸ್ಪತ್ರೆಯಲ್ಲಿನ ಮೂಲಸೌಕರ್ಯ, ಶಸ್ತ್ರಚಿಕಿತ್ಸಾ ಕೊಠಡಿ, ಮಾನವ ಸಂಪನ್ಮೂಲ, ಪ್ರಯೋಗಾಲಯ, ತೀವ್ರ ನಿಗಾ ಘಟಕ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅಗ್ನಿ ಸುರಕ್ಷತಾ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿ, ನಿಗದಿತ ಅಂಗಗಳ ಕಸಿಗೆ ಐದು ವರ್ಷಗಳ ಮಾನ್ಯತೆ ನೀಡಲಾಗುತ್ತಿದೆ. ಅಂಗವಾರು ಕಸಿ ಶಸ್ತ್ರಚಿಕಿತ್ಸೆಗೆ ಸರ್ಕಾರವು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ ದರ ಪ್ಯಾಕೇಜ್ ನಿಗದಿ ಮಾಡಿದ್ದು, ಬಿಪಿಎಲ್‌ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. 

ಹೃದಯ ಮತ್ತು ಶ್ವಾಸಕೋಶ ಕಸಿಗೆ ₹22 ಲಕ್ಷ ಪ್ಯಾಕೇಜ್ ನಿಗದಿಪಡಿಸಲಾಗಿದೆ. ಯಕೃತ್ ಕಸಿಗೆ ₹11 ಲಕ್ಷ, ಮೂತ್ರಪಿಂಡ ಕಸಿಗೆ ₹2 ಲಕ್ಷ, ಹೃದಯ ಕಸಿಗೆ ₹10 ಲಕ್ಷ ಹಾಗೂ ಶ್ವಾಸಕೋಶ ಕಸಿಗೆ ₹15 ಲಕ್ಷದ ಪ್ಯಾಕೇಜ್ ಗೊತ್ತುಪಡಿಸಲಾಗಿದೆ. 

‘ಜೀವಸಾರ್ಥಕತೆಯಡಿ ಅಂಗಾಂಗ ಕಸಿಗೆ ಹೆಸರು ನೋಂದಾಯಿಸಿಕೊಳ್ಳುವವರಲ್ಲಿ ಬಹುತೇಕರು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳೇ ಆಗಿರುತ್ತಾರೆ. ಆಸ್ಪತ್ರೆಗಳ ವ್ಯವಸ್ಥೆ, ದಾಖಲಾತಿಗಳನ್ನು ಪರಿಶೀಲಿಸಿ, ಮಾನ್ಯತೆಗೆ ಶಿಫಾರಸು ಮಾಡುತ್ತೇವೆ. ಬೆಂಗಳೂರಿನಲ್ಲಿಯೇ ಅಧಿಕ ಆಸ್ಪತ್ರೆಗಳು ನೋಂದಣಿಯಾಗಿರುವುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ರಾಜಧಾನಿಗೆ ಕಸಿ ಶಸ್ತ್ರಚಿಕಿತ್ಸೆಗೆ ಬರುತ್ತಾರೆ’ ಎಂದು ತಜ್ಞರ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು. 

8 ಜೀವ ಉಳಿಸಲು ಸಾಧ್ಯ

‘ರಾಜ್ಯದಲ್ಲಿ ಅಂಗಾಂಗ ಮತ್ತು ಅಂಗಾಂಶಗಳ ತೀವ್ರ ಕೊರತೆಯಿದೆ. ಒಬ್ಬ ವ್ಯಕ್ತಿಯು ಅಂಗಾಂಗ ದಾನದ ಮೂಲಕ ಎಂಟು ಜೀವವನ್ನು ಉಳಿಸಬಹುದಾಗಿದೆ. ಹೃದಯ ಮೂತ್ರಪಿಂಡಗಳು ಪಿತ್ತಜನಕಾಂಗ ಮೇದೋಜೀರಕ ಗ್ರಂಥಿ ಸಣ್ಣ ಕರುಳು ಮತ್ತು ಶ್ವಾಸಕೋಶವನ್ನು ದಾನ ಮಾಡಬಹುದು. ಅಂಗಾಂಶದ ಮೂಲಕ 50ಕ್ಕೂ ಹೆಚ್ಚು ಮಂದಿಗೆ ನೆರವಾಗಬಹುದು’ ಎಂದು ಜೀವಸಾರ್ಥಕತೆ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು. 

‘ಅಂಗಾಂಗ ವೈಫಲ್ಯಕ್ಕೆ ಒಳಗಾದವರಿಗೆ ಸಮಯಕ್ಕೆ ಸರಿಯಾಗಿ ಕಸಿ ಮಾಡದಿದ್ದಲ್ಲಿ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಆದ್ದರಿಂದ ಇಲಾಖೆಯಡಿ ಕಸಿಗೆ ಮಾನ್ಯತೆ ಪಡೆದ ಆಸ್ಪತ್ರೆಗಳ ವೈದ್ಯರೂ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಕುಟುಂಬಸ್ಥರಿಗೆ ಅಂಗಾಂಗ ದಾನದ ಮಹತ್ವದ ಬಗ್ಗೆ ತಿಳಿಸಿ ಸಂಗ್ರಹಿಸಲಾದ ಅಂಗಾಂಗವನ್ನು ನೋಂದಾಯಿತ ರೋಗಿಗಳಿಗೆ ಕಸಿ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.