ADVERTISEMENT

ಸ್ವಂತ ಜಾಗ, ಕಟ್ಟಡಕ್ಕಾಗಿ ಮನವಿ

ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಸಭೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 19:37 IST
Last Updated 5 ಜುಲೈ 2019, 19:37 IST
ಎಸ್ಸೆಸ್ಸೆಲ್ಸಿ– ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ನಿವೃತ್ತ ಎಸಿಪಿ ಅಬ್ದುಲ್ ಅಜೀಂ, ಹಸ್ತಲಾಘವ ನೀಡಿ ಅಭಿನಂದನೆ ಸಲ್ಲಿಸಿದರು. ನಿವೃತ್ತ ಡಿಜಿಪಿ ಓಂಪ್ರಕಾಶ್ ಇದ್ದರು – ಪ್ರಜಾವಾಣಿ ಚಿತ್ರ
ಎಸ್ಸೆಸ್ಸೆಲ್ಸಿ– ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ನಿವೃತ್ತ ಎಸಿಪಿ ಅಬ್ದುಲ್ ಅಜೀಂ, ಹಸ್ತಲಾಘವ ನೀಡಿ ಅಭಿನಂದನೆ ಸಲ್ಲಿಸಿದರು. ನಿವೃತ್ತ ಡಿಜಿಪಿ ಓಂಪ್ರಕಾಶ್ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು:ಬೆಂಗಳೂರು ಮಹಾನಗರ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಐದನೇ ವರ್ಷದ ಸರ್ವಸದಸ್ಯರ ಸಭೆ ನಡೆಯಿತು.

ಆಡುಗೋಡಿಯಲ್ಲಿರುವ ಮಂಗಳ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು, ‘ಸಂಘಕ್ಕೆ ಸ್ವಂತ ಜಾಗ ಹಾಗೂ ಕಟ್ಟಡ ನೀಡುವಂತೆ ರಾಜ್ಯ ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸಬೇಕು. ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಬೇಕು’ ಎಂಬ ನಿರ್ಣಯ ಕೈಗೊಂಡರು.

‘ಸಂಘ ಸ್ಥಾಪನೆಯಾಗಿ ಐದು ವರ್ಷವಾಗಿದ್ದು, 3,565 ಸದಸ್ಯರಿದ್ದಾರೆ. ಸಣ್ಣದೊಂದು ಕೊಠಡಿಯಲ್ಲಿ ಸಂಘದ ಕೆಲಸಗಳು ನಡೆಯುತ್ತಿವೆ. ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂಘವು ಸ್ವಂತ ಜಾಗ ಹಾಗೂ ಕಟ್ಟಡ ಹೊಂದಬೇಕಾದ ಅಗತ್ಯವಿದೆ’ ಎಂದು ಸಂಘದ ಅಧ್ಯಕ್ಷ ಯು.ಟಿ. ವೆಂಕಟರಾಮು ಹೇಳಿದರು. ‘ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಕುಟುಂಬದವರಿಗೆ ನೀಡುವ ವಿಮೆ ಮೊತ್ತವನ್ನು ₹5 ಲಕ್ಷಕ್ಕೆ ಏರಿಸ
ಬೇಕು. ಅಂತ್ಯ ಸಂಸ್ಕಾರಕ್ಕೆ ನೀಡುತ್ತಿರುವ ₹5 ಸಾವಿರ ಯಾವುದಕ್ಕೂ ಸಾಲುತ್ತಿಲ್ಲ. ಆ ಮೊತ್ತವನ್ನು ₹20 ಸಾವಿರಕ್ಕೆ ಹೆಚ್ಚಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಬೇಡಿಕೆಗಳ ಈಡೇರಿಸಲು ಪ್ರಯತ್ನಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು’ ಎಂದು ಅವರು ತಿಳಿಸಿದರು.

ADVERTISEMENT

ಸಂಘಗಳ ನಡುವೆ ಒಡಕು ಬೇಡ: ಸಭೆಯಲ್ಲಿದ್ದ ನಿವೃತ್ತ ಎಸಿಪಿ ಅಬ್ದುಲ್ ಅಜೀಂ, ‘ಬೆಂಗಳೂರಿನಲ್ಲೇ ಎರಡು ಸಂಘಗಳಿದ್ದು, ಈ ರೀತಿಯ ಒಡಕು ಸರಿಯಲ್ಲ. ಶಿಸ್ತಿನ ಇಲಾಖೆಯಲ್ಲಿ ಕೆಲಸ ಮಾಡಿದ ಅಧಿಕಾರಿಗಳು, ಒಂದೇ ಸಂಘದ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು’ ಎಂದು ಅವರು ಹೇಳಿದರು.ನಿವೃತ್ತ ಡಿಜಿಪಿ ಓಂ ಪ್ರಕಾಶ್, ‘ಸಂಘಕ್ಕೆ ಜಾಗ ಹಾಗೂ ಕಟ್ಟಡ ಒದಗಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.80 ವರ್ಷ ದಾಟಿದ ನಿವೃತ್ತ ಪೊಲೀಸರನ್ನು ಹಾಗೂ ಎಸ್ಸೆಸ್ಸೆಲ್ಸಿ– ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ನಿವೃತ್ತ ಪೊಲೀಸರ ಮಕ್ಕಳನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.