ADVERTISEMENT

ಬೆಂಗಳೂರು | ಗ್ರಾಹಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿ ಮಾಲೀಕರು ಪರಾರಿ

ಹೆಚ್ಚಿನ ಹಣದ ಆಸೆಗೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದ ಗ್ರಾಹಕರು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 23:00 IST
Last Updated 3 ಮಾರ್ಚ್ 2023, 23:00 IST
   

ಬೆಂಗಳೂರು: ಹೂಡಿಕೆ ಮಾಡಿದ್ದ ಹಣಕ್ಕೆ 36ನೇ ದಿನಕ್ಕೆ ಶೇ 10ರಷ್ಟು ಲಾಭಾಂಶ ನೀಡುವುದಾಗಿ ಹೇಳಿ ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದ ಕಂಪನಿಯ ಇಬ್ಬರು ಮಾಲೀಕರು ತಮ್ಮ ಕಚೇರಿ ಬಂದ್ ಮಾಡಿಕೊಂಡು ಪರಾರಿಯಾಗಿದ್ದಾರೆ. ರಾಜಾಜಿನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಸನ್‌ಜೋಸೆ ವೆಲ್ತ್ ಮ್ಯಾನೇಜ್‌ಮೆಂಟ್‌ನ ಮಾಲೀಕ ಜಾಜಿಪಾಲ್‌ ಹಾಗೂ ಗ್ರ್ಯಾವಿಟಿ ಕ್ಲಬ್‌ ಮಾಲೀಕ ಅಶೋಕ್‌ ಎಂ. ವಿಠ್ಠಲ್‌ ವಾಡಿ ವಿರುದ್ಧ ಪ್ರಕರಣ ದಾಖಲಾಗಿದೆ.

‘ಇಬ್ಬರೂ ಆರೋಪಿಗಳು ರಾಜಾಜಿನಗರದ ಡಾ.ರಾಜ್‌ಕುಮಾರ್‌ ರಸ್ತೆಯ 4ನೇ ಬ್ಲಾಕ್‌ನ ಅಂಬಿಕಾ ಪ್ಲಾಜಾದಲ್ಲಿ ಕಚೇರಿ ಹೊಂದಿದ್ದರು. ಹೆಚ್ಚಿನ ಲಾಭಾಂಶ ನೀಡುತ್ತೇವೆ ಎಂದು ಗ್ರಾಹಕರಿಗೆ ಹೇಳಿ ವಂಚಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ಕಮ್ಮನಹಳ್ಳಿಯ ವೈ.ಅನಿತಾ ತಮ್ಮ ಸ್ನೇಹಿತೆ ನಾಗಜ್ಯೋತಿಯಿಂದ ಈ ಸಂಸ್ಥೆಗಳ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದರು. ನಾನು ಎರಡು ವರ್ಷಗಳಿಂದ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದು, ಲಾಭ ಸಿಗುತ್ತಿದೆ ಎಂದು ನಾಗಜ್ಯೋತಿ ತಿಳಿಸಿದ್ದರು. ಅದನ್ನೇ ನಂಬಿದ್ದ ಅನಿತಾ ಸಹ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದರು. ಗ್ರಾಹಕರೊಬ್ಬರು ₹ 7.5 ಹೂಡಿಕೆ ಮಾಡಬಹುದಾಗಿದೆ. ಅವರಿಗೆ 36ನೇ ದಿನಕ್ಕೆ ಲಾಭ ನೀಡುತ್ತೇವೆ. ಹೆಚ್ಚಿನ ಹಣ ಗಳಿಸಬಹುದು ಎಂದು ಮಾಲೀಕರು ಹೇಳಿಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು
ತಿಳಿಸಿವೆ.

‘ಸನ್‌ಜೋಸೆ ವೆಲ್ತ್‌ ಮ್ಯಾನೇಜ್‌ಮೆಂಟ್‌ನ ಜಾಜಿಪಾಲ್‌ ಅವರ ಮಹೀಂದ್ರ ಬ್ಯಾಂಕ್‌ ಖಾತೆಗೆ ಅನಿತಾ ಆರಂಭಿಕವಾಗಿ ₹ 3 ಲಕ್ಷ ಜಮೆ ಮಾಡಿದ್ದರು. 36ನೇ ದಿನಕ್ಕೆ ಅನಿತಾ ಅವರ ತಾಯಿ ಖಾತೆಗೆ ₹ 3 ಲಕ್ಷವನ್ನು ಜಾಜಿಪಾಲ್‌ ವಾಪಸ್‌ ಹಾಕಿದ್ದರು. ಇದರಿಂದ ನಂಬಿಕೆ ಬಂದಿತ್ತು. ಅನಿತಾ ಅವರು ಪತಿ ಶಶಿಧರ್ ಹೆಸರಿನಲ್ಲಿ₹ 7.50 ಲಕ್ಷ ಹೂಡಿಕೆ ಮಾಡಿದ್ದರು. ಅದಾದ ಮೇಲೆ ಸಂಬಂಧಿ ಕಾರ್ತಿಕ್‌ ಹೆಸರಿನಲ್ಲಿ ₹ 5 ಲಕ್ಷ ಹೂಡಿಕೆ ಮಾಡಿದ್ದರು. ಹಂತ ಹಂತವಾಗಿ ಒಟ್ಟು ₹ 27.50 ಲಕ್ಷ ಹೂಡಿಕೆ ಮಾಡಿದ್ದರು. ಈ ಹಣಕ್ಕೆ ಲಾಭಾಂಶ ನೀಡಿಲ್ಲ. ಕಚೇರಿಯ ಬಾಗಿಲು ಮುಚ್ಚಲಾಗಿದೆ. ಕಂಪನಿ ಮಾಲೀಕರು ಕರೆಯನ್ನೂ ಸ್ವೀಕರಿಸಿಲ್ಲ’ ಎಂದು ಆರೋಪಿಸಿ
ದೂರು ನೀಡಲಾಗಿದೆ.

‘ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.