
ಬೊಮ್ಮನಹಳ್ಳಿ: ‘ಮೈಬಣ್ಣ ಕುರಿತು ಶಿಕ್ಷಕರೊಬ್ಬರು ಅವಹೇಳನ ಮಾಡಿದ್ದರಿಂದಲೇ ಮನನೊಂದು ದಂತ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆʼ ಎಂದು ಆರೋಪಿಸಿ ಪೋಷಕರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.
ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಮೂರನೇ ವರ್ಷದ ದಂತ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಚಂದಾಪುರದ ಯಶಸ್ವಿನಿ ಅವರು ಜ.8ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
‘ಮಗಳ ಆತ್ಮಹತ್ಯೆಗೆ ಕಾರಣ ತಿಳಿದಿರಲಿಲ್ಲ, ವಿದ್ಯಾರ್ಥಿಗಳು ಈ ಬಗ್ಗೆ ನಮ್ಮ ಗಮನಕ್ಕೆ ತಂದಾಗಲೇ ಕಾರಣ ತಿಳಿಯಿತು. ಹಲವು ಬಾರಿ ಕಾಲೇಜಿನಲ್ಲಿ ಕಿರುಕುಳ ಕೊಡುತ್ತಿದ್ದಾರೆಂದು ಹೇಳುತ್ತಿದ್ದಳು. ಇದೆಲ್ಲ ಸಹಜ ಎಂದು ಭಾವಿಸಿ, ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದರ ಪರಿಣಾಮ ಮಗಳನ್ನೇ ಕಳೆದುಕೊಂಡಿದ್ದೇವೆ. ಇಂತಹ ಸ್ಥಿತಿ ಯಾವ ಮಕ್ಕಳಿಗೂ ಬರಬಾರದು’ ಎಂದು ಕಾಲೇಜಿನ ಶಿಕ್ಷಕರ ವಿರುದ್ಧ ಮೃತ ವಿದ್ಯಾರ್ಥಿನಿಯ ತಾಯಿ ಪರಿಮಳಾ ಆಕ್ರೋಶ ವ್ಯಕ್ತಪಡಿಸಿದರು.
‘ಶಿಕ್ಷಕರೊಬ್ಬರು ಯಶಸ್ವಿನಿಯ ಮೈಬಣ್ಣ ಕುರಿತು ತೇಜೋವಧೆ ಮಾಡಿದ್ದರಿಂದಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಡಿಯಾಲಜಿ ವಿಭಾಗದ ಶಿಕ್ಷಕರು ಮತ್ತು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ನಿತ್ಯವೂ ಕಿರುಕುಳ ನೀಡುತ್ತಿದ್ದಾರೆ, ಇದನ್ನು ಪ್ರಶ್ನಿಸಲಾಗದೇ ಸಹಿಸಿಕೊಂಡಿದ್ದೇವೆ’ ಎಂದು ಮೃತ ವಿದ್ಯಾರ್ಥಿನಿಯ ಸಹಪಾಠಿ ಈಶ್ವರ್ ಹೇಳಿದರು.
ಅಧ್ಯಕ್ಷರಿಂದ ಬೆದರಿಕೆ ಆರೋಪ:
ಮೃತಳಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದಾಗ ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ ವಿದ್ಯಾರ್ಥಿಗಳು, ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಪೋಷಕರು ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯು ಘಟನೆಗೆ ಕಾರಣರು ಎನ್ನಲಾದ ಉಪನ್ಯಾಸಕರಾದ ಡಾ.ಅನ್‌ಮೋಲ್ ರಾಜ್ದನ್ ಡಾ.ಸಬಾನಾ ಬಾನು ಡಾ.ಫೈಕಾ ಕೋಲ್ಕರ್ ಡಾ.ಸಿಂಧು ಡಾ.ಆಲ್ಬಾ ದಿನೇಶ್ ಮತ್ತು ಡಾ.ಸುಸ್ಮಿನಿ ಹೆಗ್ಡೆ ಅವರನ್ನು ಅಮಾನತುಗೊಳಿಸಿದೆ ಎಂದು ಉಪ ಪ್ರಾಂಶುಪಾಲ ಡಾ.ರಮೇಶ್ ಹೇಳಿದರು. ಪ್ರಾಂಶುಪಾಲರನ್ನೂ ಅಮಾನತು ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ‘ಮೃತ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಮರು ಪಾವತಿಸಬೇಕು. ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಸ್‌ಎಫ್‌ಐ ಸಂಘಟನೆಯ ರಾಜ್ಯ ಉಪಾಧ್ಯಕ್ಷ ದೊಡ್ಡ ಬಸವರಾಜು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.