ADVERTISEMENT

ಕಳ್ಳದಾರಿಯಲ್ಲಿ ಓಡಾಟ; ಅಕ್ಕ– ಪಕ್ಕದವರಲ್ಲಿ ಆತಂಕ

ಪಾದರಾಯನಪುರದಲ್ಲಿ ಹೆಚ್ಚುತ್ತಿರುವ ಕೋವಿಡ್–19 ಪ್ರಕರಣಗಳು * ಕಾಂಪೌಂಡ್‌ ಹಾರುವ ಯುವತಿಯರು

​ಪ್ರಜಾವಾಣಿ ವಾರ್ತೆ
Published 14 ಮೇ 2020, 15:45 IST
Last Updated 14 ಮೇ 2020, 15:45 IST
ಕೊರೊನಾ ವೈರಸ್
ಕೊರೊನಾ ವೈರಸ್   

ಬೆಂಗಳೂರು: ನಿಯಂತ್ರಿತ ಪ್ರದೇಶ (ಕಂಟೈನ್‌ಮೆಂಟ್‌) ಪಾದರಾಯನಪುರದ ಕೆಲ ನಿವಾಸಿಗಳು ಕಳ್ಳದಾರಿಗಳ ಮೂಲಕ ಅಕ್ಕ–ಪಕ್ಕದ ಪ್ರದೇಶಗಳಿಗೂ ಬಂದು ಹೋಗುತ್ತಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ‘ಕೋವಿಡ್–19’ ಪ್ರಕರಣಗಳು ಪಾದರಾಯನಪುರದಲ್ಲಿ ವರದಿಯಾಗಿವೆ. ಈ ಪ್ರದೇಶದ ಪ್ರಮುಖ ಹಾಗೂ ಒಳ ರಸ್ತೆಗಳೆಲ್ಲವನ್ನೂ ಪೊಲೀಸರು ಬ್ಯಾರಿಕೇಡ್ ಹಾಕಿ ಮುಚ್ಚಿದ್ದಾರೆ. ಇಷ್ಟಾದರೂ ಹಲವರು ಪೊಲೀಸರ ಕಣ್ತಪ್ಪಿಸಿ ಕಾಂಪೌಂಡ್ ಹಾರಿ ಹಾಗೂ ರೈಲ್ವೆ ಹಳಿ ಮೂಲಕ ಸಂಚರಿಸುತ್ತಿದ್ದಾರೆ.

ವಿಜಯನಗರ, ಹೊಸಹಳ್ಳಿ, ದೀಪಾಂಜಲಿನಗರ, ಹಂಪಿನಗರ, ಕೆ.ಆರ್‌.ಮಾರುಕಟ್ಟೆಗೆ ಪಾದರಾಯನಪುರದ ಕೆಲ ನಿವಾಸಿಗಳು ಬಂದು ಹೋಗುತ್ತಿದ್ದಾರೆ. ಹೀಗೆ ಕಳ್ಳದಾರಿಯಲ್ಲಿ ಹೋಗುವವರ ವಿಡಿಯೊಗಳನ್ನು ಚಿತ್ರೀಕರಿಸಿರುವ ಸ್ಥಳೀಯರು, ಪೊಲೀಸರಿಗೆ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಕೋರಿದ್ದಾರೆ.

ADVERTISEMENT

ಇತ್ತೀಚೆಗಷ್ಟೇ ಪಾದರಾಯನಪುರದ ಯುವತಿಯರಿಬ್ಬರು ಕಾಂಪೌಂಡ್ ಹಾರಿ ವಿಜಯನಗರಕ್ಕೆ ಬಂದು ಹೋಗಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಬುರ್ಖಾ ಧರಿಸಿದ್ದರಿಂದ ಯುವತಿಯರ ಗುರುತು ಪತ್ತೆಯಾಗಿರಲಿಲ್ಲ. ಇದೀಗ ಅದೇ ರೀತಿಯಲ್ಲಿ ಸಾಕಷ್ಟು ಮಂದಿ ಓಡಾಡುತ್ತಿದ್ದು, ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.

‘ಪಾದರಾಯಪುರದ ಬಹುತೇಕ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಪ್ರತಿ ಚೆಕ್‌ಪೋಸ್ಟ್‌ನಲ್ಲೂ ಸಿಬ್ಬಂದಿ ಇದ್ದಾರೆ. ಅಷ್ಟಾದರೂ ಸ್ಥಳೀಯರು ಕಳ್ಳದಾರಿ ಮೂಲಕ ಸಂಚರಿಸುತ್ತಿದ್ದಾರೆ. ಇದರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ಇಂಥವರನ್ನು ಪತ್ತೆ ಮಾಡಲಾಗುತ್ತಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.