
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ನ.22ರಂದು ‘ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ’ ಆಯೋಜಿಸಲಾಗಿದೆ.
‘ಪಹಲ್ಗಾಮ್‌ನಲ್ಲಿ ಹತ್ಯೆಯಾದವರಿಗೆ ಇದೇ ಸಂದರ್ಭದಲ್ಲಿ ‘ನುಡಿ ನಮನ ಕಾರ್ಯಕ್ರಮ’ ಹಾಗೂ ಕರುನಾಡು ಸಾಧಕರು ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ತಿಳಿಸಿದರು.
‘ಕನ್ನಡ ಭಾಷೆ ಉಳಿಸಿ, ಬೆಳೆಸಬೇಕು, ವಿಶ್ವಭಾಷೆಯಾಗಿ ಮಾಡಬೇಕು ಎಂಬ ಉದ್ದೇಶದಿಂದ 2022ರಲ್ಲಿ ಕಾಶಿಯಲ್ಲಿ ‘ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ’, 2023ರಲ್ಲಿ ನೇಪಾಳದ ಪಶುಪತಿ ದೇವಾಲಯ ಸನ್ನಿಧಾನದಲ್ಲಿ ‘ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ’ ಮತ್ತು 2024ರಲ್ಲಿ ಹರಿದ್ವಾರದಲ್ಲಿ ‘ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ’ ಆಯೋಜಿಸಲಾಗಿತ್ತು. ಈ ಬಾರಿ ಪಹಲ್ಗಾಮ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಜಿಬಿಎ ಅಧಿಕಾರಿಗಳು, ನೌಕರರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಿನ್ನೆಲೆ ಗಾಯಕಿ ಅನುರಾಧ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ಸಂಪತ್ ರಾಜ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮಾಜಿ ಮೇಯರ್ ಎಂ.ಗೌತಮ್ ಕುಮಾರ್, ಬೆಂಗಳೂರು ದೂರದರ್ಶನ ಕೇಂದ್ರದ ಮುಖ್ಯಸ್ಥೆ ಆರತಿ ಎಚ್.ಎನ್, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗ, ವಕೀಲ ವಿ.ಶ್ರೀನಿವಾಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಅವರ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಕೆ.ಜಿ.ರವಿ, ಕೆ.ಮಂಜೇಗೌಡ, ಎಚ್.ಬಿ.ಹರೀಶ್, ಮಂಜುನಾಥ್, ಎಸ್.ಜಿ.ಸುರೇಶ್, ಸಂತೋಷ್ ಕುಮಾರ್ ನಾಯ್ಕ್, ಎಸ್.ಎನ್.ಸೋಮಶೇಖರ್ , ಎಲ್.ಆರ್, ಮಂಜುನಾಥ್, ನರಸಿಂಹ, ಶ್ರೀಧರ್, ಡಾ.ಶೋಭ, ರೇಣುಕಾಂಬ, ವಾಣಿ, ಮಹಾದೇವಿ, ಅಕ್ಕಮಹದೇವಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.