ADVERTISEMENT

ಗುಂಡಿ ಮುಚ್ಚಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 16:45 IST
Last Updated 19 ಅಕ್ಟೋಬರ್ 2021, 16:45 IST
ಮೈಸೂರು ರಸ್ತೆಯಲ್ಲಿ ಗುಂಡಿ ಮುಚ್ಚಿಸಿದ ಸಂಚಾರ ಪೊಲೀಸರು
ಮೈಸೂರು ರಸ್ತೆಯಲ್ಲಿ ಗುಂಡಿ ಮುಚ್ಚಿಸಿದ ಸಂಚಾರ ಪೊಲೀಸರು   

ಬೆಂಗಳೂರು: ಮೈಸೂರು ರಸ್ತೆಯ ಬಹುತೇಕ ಕಡೆ ಬಿದ್ದಿರುವ ಗುಂಡಿಗಳನ್ನು ಸಂಚಾರ ಪೊಲೀಸರೇ ಮುಚ್ಚಿಸಿದ್ದು, ಇದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಪೊಲೀಸರನ್ನು ನೋಡಿ, ಬಿಬಿಎಂಪಿ ಅಧಿಕಾರಿಗಳು ಕಲಿಯಬೇಕು’ ಎಂದು ಜನ ಪಾಠ ಹೇಳಿದ್ದಾರೆ.

ರಸ್ತೆಯಲ್ಲಿರುವ ಗುಂಡಿಯಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಜೊತೆಗೆ, ವಾಹನಗಳು ನಿಧಾನವಾಗಿ ಸಂಚರಿಸುತ್ತಿದ್ದರಿಂದ ದಟ್ಟಣೆಯೂ ಉಂಟಾಗುತ್ತಿದೆ. ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದು, ದಟ್ಟಣೆ ನಿಯಂತ್ರಿಸಲು ಪೊಲೀಸರೂ ಪರದಾಡುತ್ತಿದ್ದಾರೆ.

ಗುಂಡಿಗಳ ಸಮೀಕ್ಷೆ ಮಾಡಿ ಬಿಬಿಎಂಪಿ ಅಧಿಕಾರಿಗಳಿಗೆ ಪೊಲೀಸರು ಈಗಾಗಲೇ ವರದಿ ನೀಡಿದ್ದಾರೆ. ಇಷ್ಟಾದರೂ ಅಧಿಕಾರಿಗಳು, ಗುಂಡಿ ಮುಚ್ಚಿಸಲು ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಪೊಲೀಸರೇ ರಸ್ತೆಗೆ ಇಳಿದು ಗುಂಡಿಗಳನ್ನು ಮುಚ್ಚಿಸಿದರು.

ADVERTISEMENT

ಜಲ್ಲಿ ಮಿಶ್ರಿತ ಸಿಮೆಂಟ್‌ನ್ನು ಟ್ರ್ಯಾಕ್ಟರ್‌ನಲ್ಲಿ ತರಿಸಿದ್ದ ಪೊಲೀಸರು, ಗುಂಡಿ ಇರುವ ಜಾಗದಲ್ಲಿ ಹಾಕಿಸಿದರು. ಕೂಲಿ ಕಾರ್ಮಿಕರು, ಗುಂಡಿ ಜಾಗವನ್ನು ಸಮದಟ್ಟು ಮಾಡಿದರು.

ಪೊಲೀಸರು ಗುಂಡಿ ಮುಚ್ಚಿರುವ ಫೋಟೊವನ್ನು ಬೆಂಗಳೂರು ಸಂಚಾರ ವಿಭಾಗದ (ಪಶ್ಚಿಮ) ಡಿಸಿಪಿ ಕುಲದೀಪ್ ಕುಮಾರ್ ಜೈನ್, ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಸುಗಮ ಸಂಚಾರಕ್ಕಾಗಿ ಕೆಲಸ ಮಾಡುವ ಪೊಲೀಸರು, ಇದೀಗ ಗುಂಡಿ ಮುಚ್ಚುವ ಕೆಲಸವನ್ನೂ ಮಾಡುತ್ತಿದ್ದಾರೆ. ನಾವೆಲ್ಲರೂ ಬಿಬಿಎಂಪಿಗೆ ತೆರಿಗೆ ಕಟ್ಟುವುದನ್ನು ನಿಲ್ಲಿಸೋಣ. ಅದೇ ಹಣವನ್ನು ಪೊಲೀಸರಿಗೆ ನೀಡೋಣ’ ಎಂದು ಸಾರ್ವಜನಿಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರು, ‘ಜನರ ನಡುವೆಯೇ ಇರುವ ಪೊಲೀಸರು, ರಸ್ತೆಗೆ ಇಳಿದು ಗುಂಡಿ ಮುಚ್ಚುತ್ತಿದ್ದಾರೆ. ಎ.ಸಿ ಕಚೇರಿಯಲ್ಲಿ ಕುಳಿತಿರುವ ಬಿಬಿಎಂಪಿ ಅಧಿಕಾರಿಗಳಿಗೆ ನಾಚಿಕೆ ಆಗಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.