ADVERTISEMENT

ಪಟ್ನಾದ ನ್ಯಾಯಮೂರ್ತಿಗಳಿಗೆ ಅಗ್ರಪಟ್ಟ!

ರಾಷ್ಟ್ರೀಯ ಕಾನೂನು ಶಾಲೆ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2018, 19:30 IST
Last Updated 9 ಆಗಸ್ಟ್ 2018, 19:30 IST
national law school
national law school   

ಬೆಂಗಳೂರು: ನಗರದ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್ಐಯು) 2018–19ನೇ ಸಾಲಿನ ಘಟಿಕೋತ್ಸವಕ್ಕೆ ಪಟ್ನಾ ಹೈಕೋರ್ಟ್‌ನ 14 ನ್ಯಾಯಮೂರ್ತಿಗಳನ್ನು ವಿಶೇಷ ಆಹ್ವಾನಿತರನ್ನಾಗಿ ಕರೆಯಲು ಉದ್ದೇಶಿಸಲಾಗಿದೆ. ಆದರೆ, ಕರ್ನಾಟಕ ಹೈಕೋರ್ಟ್‌ನ ಒಬ್ಬ ನ್ಯಾಯಮೂರ್ತಿಗೆ ಮಾತ್ರ ಆಮಂತ್ರಣ ನೀಡಲಾಗಿದೆ.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ‘ಈ ರೀತಿ ವಿಶೇಷ ಆಹ್ವಾನಿತರನ್ನು ಕರೆಯಲು ರಾಷ್ಟ್ರೀಯ ಕಾನೂನು ಶಾಲೆಯ ಬೈ–ಲಾದಲ್ಲಿ ಅವಕಾಶವಿಲ್ಲ. ಆದ್ದರಿಂದ ಕುಲಾಧಿಪತಿಗಳೂ ಆದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಸ್ಟಾರ್ ಹೋಟೆಲ್‌: ‘ಹೊರಗಿನಿಂದ ಬರುವ ನ್ಯಾಯಮೂರ್ತಿಗಳು ಹಾಗೂ ಅತಿಥಿಗಳು ಸ್ಟಾರ್ ಹೋಟೆಲ್‌ಗಳಲ್ಲೇ ಯಾಕೆ ಉಳಿದುಕೊಳ್ಳಬೇಕು. ಅವರ ಪತ್ನಿ ಅಥವಾ ಪತಿಗೂ ಯಾಕೆ ಹೋಗಿ ಬರುವ ಖರ್ಚು ವೆಚ್ಚ ನೀಡಬೇಕು. ಇದನ್ನೆಲ್ಲಾ ವಿದ್ಯಾರ್ಥಿಗಳ ಶುಲ್ಕದಿಂದಲೇ ಭರಿಸಲಾಗುತ್ತಿದೆ. ಹೀಗೆ ದುಂದು ಮಾಡುವ ಬದಲು ಈ ಹಣವನ್ನು ಬಡ ವಿದ್ಯಾರ್ಥಿಯ ಸ್ಕಾಲರ್‌ಷಿಪ್‌ಗೆ ವಿನಿಯೋಗಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ವಕೀಲರು ಏನು ಮಾಡುತ್ತಾರೆ?: ‘ದುಂದು ವೆಚ್ಚ ಮಾಡುವ ಪ್ರಶ್ನೆಯೇ ಇಲ್ಲ. ನ್ಯಾಯಮೂರ್ತಿ ಹುದ್ದೆಯ ಘನತೆಗೆ ತಕ್ಕಂತೆ ಅವರನ್ನು ನಡೆಸಿಕೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

‘ರಾಜ್ಯದ ವಕೀಲರು ಅಖಿಲ ಭಾರತೀಯ ವಕೀಲರ ಪರಿಷತ್‌ ಪ್ರತಿನಿಧಿಸುತ್ತಾರೆ. ಆದರೆ, ಅವರು ಯಾರೂ ಈ ಅಂಶವನ್ನು ದೆಹಲಿಯಲ್ಲಿ ಏಕೆ ಪ್ರಶ್ನಿಸುವುದಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಕಾಲೇಜಿನ ಹಿರಿಯ ಅಧಿಕಾರಿಗಳು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.