ADVERTISEMENT

ಹೋಟೆಲ್‌ನೊಳಗೆ ಬಂದ ನವಿಲು

​ಪ್ರಜಾವಾಣಿ ವಾರ್ತೆ
Published 20 ಮೇ 2021, 19:33 IST
Last Updated 20 ಮೇ 2021, 19:33 IST
ಹೋಟೆಲ್‌ನ ಶೌಚಾಲಯದ ಕೊಠಡಿ ಎದುರು ನಿಂತಿರುವ ನವಿಲು
ಹೋಟೆಲ್‌ನ ಶೌಚಾಲಯದ ಕೊಠಡಿ ಎದುರು ನಿಂತಿರುವ ನವಿಲು   

ಬೆಂಗಳೂರು: ಲಾಕ್‌ಡೌನ್‌ ಕಾರಣ ಹೋಟೆಲ್‌ ಬಾಗಿಲು ಮುಚ್ಚಿತ್ತು. ಜನರಿಲ್ಲದೆ ಬಿಕೋ ಎನ್ನುತ್ತಿದ್ದ ಕುಟೀರದೊಳಗೆ ಬೆಳಿಗ್ಗೆಯೇ ಅತಿಥಿಯೊಂದು ಪ್ರತ್ಯಕ್ಷವಾಗಿತ್ತು. ಅದನ್ನು ಕಂಡ ಸ್ಥಳೀಯರಿಗೆ ಖುಷಿಯೋ ಖುಷಿ. ಇಷ್ಟು ದಿನ ಆ ಪಕ್ಷಿಯನ್ನು ದೂರದಿಂದಲೇ ಕಣ್ತುಂಬಿಕೊಂಡಿದ್ದ ಅವರು ಅದನ್ನು ಹಿಡಿದು ಸಂಭ್ರಮಿಸಿದರು. ಮೊಬೈಲ್‌ನಲ್ಲೇ ಒಂದಷ್ಟು ಫೋಟೊಗಳನ್ನೂ ಕ್ಲಿಕ್ಕಿಸಿಕೊಂಡರು...

ಇದು ನಡೆದದ್ದುಚಿಕ್ಕಬೇಗೂರಿನ ಸಮೃದ್ಧಿ ಕುಟೀರದಲ್ಲಿ. ಈ ಹೋಟೆಲ್‌ನಲ್ಲಿ ಬೆಳಿಗ್ಗೆ10.30ರ ಸುಮಾರಿಗೆ ಹೆಣ್ಣು ನವಿಲು ಕಾಣಿಸಿಕೊಂಡಿತ್ತು. ಅದನ್ನು ಹಿಡಿದ ಹೋಟೆಲ್‌ ಮಾಲೀಕರು ಪಾಲಿಕೆಯ ವನ್ಯಜೀವಿ ವಿಭಾಗದ ಸಿಬ್ಬಂದಿಗೆ ಒಪ್ಪಿಸಿದರು. ಅವರು ಅದನ್ನು ಅರಣ್ಯದೊಳಗೆ ಬಿಟ್ಟರು.

‘ಹೋಟೆಲ್‌ಗೆ ಬೀಗ ಹಾಕಿ ನಾವು ಹೊರಗೆ ಹೋಗಿದ್ದೆವು. ಅಲ್ಲಿಂದ ಬಂದು ನೋಡಿದಾಗ ಬೀಗ ಹಾಕಿದ್ದ ಶೌಚಾಲಯದ ಕೊಠಡಿಯ ಎದುರು ನವಿಲು ನಿಂತಿತ್ತು. ನಮ್ಮನ್ನು ಕಂಡೊಡನೆಯೇ ಮೇಲಕ್ಕೆ ಹಾರಿದ ನವಿಲು ಶೌಚಾಲಯದ ಕೊಠಡಿ ಪ್ರವೇಶಿಸಿತು. ಬಳಿಕ ಬಾಗಿಲು ತೆರೆದು ಅದನ್ನು ಹಿಡಿದೆವು. ಪಾಲಿಕೆಯ ಮಾಜಿ ಸದಸ್ಯ ಆಂಜನಪ್ಪ ಅವರಿಗೆ ಈ ವಿಚಾರವನ್ನು ತಿಳಿಸಿದೆವು. ಅವರು ಪಾಲಿಕೆಯ ವನ್ಯಜೀವಿ ವಾರ್ಡನ್‌ ಪ್ರಸನ್ನ ಕುಮಾರ್‌ ಅವರಿಗೆ ಮಾಹಿತಿ ರವಾನಿಸಿದರು’ ಎಂದು ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹೋಟೆಲ್‌ನ ಸನಿಹದಲ್ಲೇ ಬೇಗೂರು ಕೆರೆ ಇದ್ದು ಅದರ ಸುತ್ತಲೂ ಬಿದಿರಿನ ಪೊದೆಗಳು ಬೆಳೆದುಕೊಂಡಿವೆ. ಅಲ್ಲಿ ಆಗಾಗ ನವಿಲುಗಳು ಕಾಣಿಸಿಕೊಳ್ಳುತ್ತಿರುತ್ತವೆ. ನೈಸ್‌ ರಸ್ತೆಯಲ್ಲೂ ನವಿಲುಗಳನ್ನು ನೋಡಿದ್ದೇವೆ. ಆದರೆ, ಹೋಟೆಲ್‌ನೊಳಗೆ ಬಂದಿದ್ದು ಇದೇ ಮೊದಲು. ಅದನ್ನು ನೋಡಿ ನಿಜಕ್ಕೂ ಖುಷಿಯಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.