
ಪೀಣ್ಯ ದಾಸರಹಳ್ಳಿ: ಪೀಣ್ಯ 2ನೇ ಹಂತದ ಬಸ್ ನಿಲ್ದಾಣದಲ್ಲಿರುವ ಬೆಂಗಳೂರು ಜಲಮಂಡಳಿ ಕಚೇರಿಯ ಮುಂಭಾಗದಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಇನ್ನೂ ಉದ್ಘಾಟನೆ ಆಗದೆ ಇರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕ ಎಸ್. ಮುನಿರಾಜು ಅವರು ಪೀಣ್ಯ 2ನೇ ಹಂತದ ನಿವಾಸಿಗಳಿಗೆ ಉಪಯೋಗವಾಗಲಿ ಎಂದು ಘಟಕ ನಿರ್ಮಾಣ ಮಾಡಲು ಸೂಚಿಸಿದ್ದರು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟಕಕ್ಕೆ ಉದ್ಘಾಟನಾ ಭಾಗ್ಯ ದೊರೆತಿಲ್ಲ. ಇದರಿಂದಾಗಿ ಶುದ್ಧ ಕುಡಿಯುವ ನೀರಿನ ನಿರೀಕ್ಷೆಯಲ್ಲಿದ್ದ ಜನರಿಗೆ ಬೇಸರವಾಗಿದೆ.
ಪೀಣ್ಯ 2ನೇ ಹಂತದಲ್ಲಿ ಜಲಮಂಡಳಿಯು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವು ಜಲಮಂಡಳಿ ಹಾಗೂ ಜಿಬಿಎ (ಹಿಂದಿನ ಬಿಬಿಎಂಪಿ) ಅಧಿಕಾರಿಗಳ ನಡುವಿನ ಗೊಂದಲದಿಂದಾಗಿ ಉದ್ಘಾಟನೆಯ ಭಾಗ್ಯ ಕಾಣದೆ ಹಾಗೆಯೇ ಇದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಜಿಬಿಎಯಿಂದ ಜಲಮಂಡಳಿಯ ಬೋರ್‌ವೆಲ್ ವಿಭಾಗಕ್ಕೆ ಹಸ್ತಾಂತರಿಸಬೇಕು ಎಂದು ತಿಳಿಸುತ್ತಾರೆ.
ಘಟಕದ ಕಾಮಗಾರಿ ಮುಗಿದಿದ್ದು, ವಿದ್ಯುತ್ ಸಂಪರ್ಕ ನೀಡಲಾಗಿದೆ. ನೀರಿನ ಸಂಪರ್ಕದ ಪೈಪ್ ಅಳವಡಿಕೆಯಾಗಿದೆ. ಜಲ ಮಂಡಳಿಯವರನ್ನು ಕೇಳಿದರೆ, ಬೋರ್‌ವೆಲ್ ವಿಭಾಗಕ್ಕೆ ಬರುವುದರಿಂದ ನಾವು ಶುದ್ಧ ಕುಡಿಯುವ ನೀರಿನ ಘಟಕವನ್ನು ಚಾಲನೆ ನೀಡಲು ಬರುವುದಿಲ್ಲ, ಅವರನ್ನೇ ಕೇಳಬೇಕು' ಎಂದು ತಿಳಿಸಿದರು.
‘ಆರೋಗ್ಯ ಕಾಪಾಡಿಕೊಳ್ಳಲು ಶುದ್ಧ ಕುಡಿಯುವ ನೀರಿನ ಘಟಕದ ಅವಶ್ಯಕತೆ ಇರುವುದನ್ನು ಮನಗಂಡ ಶಾಸಕರು ಕುಡಿಯುವ ನೀರಿನ ಘಟಕದ ನಿರ್ಮಾಣಕ್ಕೆ ಆದೇಶ ನೀಡಿದ್ದರು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮಗೆ ನೀರಿನ ಭಾಗ್ಯ ಸಿಗುತ್ತಿಲ್ಲ' ಎಂದು ಸ್ಥಳೀಯರು ತಿಳಿಸಿದರು.
ಪೀಣ್ಯ 2ನೇ ಹಂತದ ಬಸ್ ನಿಲ್ದಾಣವು ಸದಾ ಜನಜಂಗುಳಿಯಿಂದ ಕೂಡಿದ ಪ್ರದೇಶವಾಗಿದ್ದು, ಈ ಭಾಗಕ್ಕೆ ಕುಡಿಯುವ ನೀರಿನ ಅವಶ್ಯಕತೆ ಇದೆ. ಅಕ್ಕ–ಪಕ್ಕದ ನಿವಾಸಿಗಳು ತುಂಬಾ ದೂರದಿಂದ ನೀರು ತರುವ ಅನಿವಾರ್ಯ ಎದುರಾಗಿದ್ದು, ಪೀಣ್ಯ 2ನೇ ಹಂತದಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇದು ಬೇಗ ಆದರೆ ಒಳ್ಳೆಯದು ಎಂದು ಪೀಣ್ಯ 2ನೇ ಹಂತದ ನಿವಾಸಿ ಹರೀಶ್ ತಿಳಿಸಿದರು.
‘ಜಿಬಿಎ ಹಾಗೂ ಜಲಮಂಡಳಿ ಅಧಿಕಾರಿಗಳ ಕಿತ್ತಾಟದಿಂದಾಗಿ ನೀರಿನ ಘಟಕ ಉದ್ಘಾಟನೆಯಾಗಿಲ್ಲ. ಇದರಿಂದಾಗಿ ಪೀಣ್ಯ 2ನೇ ಹಂತದ ನಿವಾಸಿಗಳು ದೂರದಿಂದ ಕುಡಿಯುವ ನೀರು ತರುವಂತಾಗಿದೆ’ ಎಂದು ಸ್ಥಳೀಯ ನಿವಾಸಿ ಶಿಲ್ಪಾರಾಣಿ ತಿಳಿಸಿದರು.
ಬೋರ್‌ವೆಲ್ ಆ್ಯಂಡ್ ವಾಟರ್‌ಪಂಪ್ ನಿರ್ವಹಣಾ ವಿಭಾಗದ ಎಂಜಿನಿಯರ್ ಆಶಾ ಪ್ರತಿಕ್ರಿಯಿಸಿ, ‘ಎರಡು ತಿಂಗಳ ಹಿಂದೆ ಟೆಂಡರ್ ಕರೆದಿದ್ದೇವೆ. ಜಿಬಿಎ ಅವರು ನಮಗೆ ಹಸ್ತಾಂತರ ಮಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.