ADVERTISEMENT

ಸಂಚಾರ ನಿಯಮ ಉಲ್ಲಂಘನೆ | ದಂಡ ಬಾಕಿ: ಮನೆ ಬಾಗಿಲಿಗೆ ಪೊಲೀಸರು

ಠಾಣೆವಾರು ಟಾಪ್–100 ವಾಹನಗಳ ಮಾಲೀಕರ ಪಟ್ಟಿ ಸಿದ್ಧ

ಸಂತೋಷ ಜಿಗಳಿಕೊಪ್ಪ
Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
ಸಂಚಾರ ನಿಯಮಗಳನ್ನು 643 ಬಾರಿ ಉಲ್ಲಂಘಿಸಿ ₹ 3.25 ಲಕ್ಷ ದಂಡ ಬಾಕಿ ಉಳಿಸಿಕೊಂಡಿದ್ದ ದ್ವಿಚಕ್ರ ವಾಹನ
ಸಂಚಾರ ನಿಯಮಗಳನ್ನು 643 ಬಾರಿ ಉಲ್ಲಂಘಿಸಿ ₹ 3.25 ಲಕ್ಷ ದಂಡ ಬಾಕಿ ಉಳಿಸಿಕೊಂಡಿದ್ದ ದ್ವಿಚಕ್ರ ವಾಹನ   

ಬೆಂಗಳೂರು: ನಗರದಲ್ಲಿ ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿ ಕಣ್ತಪ್ಪಿಸಿಕೊಂಡು ಓಡಾಡುತ್ತಿರುವ ವಾಹನಗಳ ಮಾಲೀಕರನ್ನು ಪತ್ತೆ ಮಾಡಿ ದಂಡ ವಸೂಲಿ ಮಾಡಲು ಪೊಲೀಸರು ಮನೆ ಬಾಗಿಲಿಗೇ ಲಗ್ಗೆ ಇಡುತ್ತಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ಪ್ರಮಾಣ ಹೆಚ್ಚಾಗುತ್ತಿದ್ದು, ಹಲವರು ದಂಡ ಕಟ್ಟದೆ ಬಾಕಿ ಉಳಿಸಿಕೊಳ್ಳುತ್ತಿದ್ದಾರೆ. ಅತೀ ಹೆಚ್ಚು ದಂಡ ಬಾಕಿ ಇರುವ ವಾಹನಗಳ ಮಾಲೀಕರ ಪಟ್ಟಿ ಸಿದ್ಧಪಡಿಸಿರುವ ಪೊಲೀಸರು, ಅವರ ಮನೆ ಬಾಗಿಲಿಗೆ ಹೋಗಿ ದಂಡ ವಸೂಲಿ ಮಾಡುವ ಹೊಸ ಪ್ರಯತ್ನ ಆರಂಭಿಸಿದ್ದಾರೆ.

‘ಸಂಚಾರ ನಿಯಮ ಉಲ್ಲಂಘನೆಯಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಹೀಗಾಗಿ, ನಿಯಮ ಉಲ್ಲಂಘನೆ ಪತ್ತೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ನಗರದ ಬಹುತೇಕ ರಸ್ತೆಗಳಲ್ಲಿ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಾರಾದರೂ ನಿಯಮ ಉಲ್ಲಂಘನೆ ಮಾಡಿದರೆ ಫೋಟೊ ಸಮೇತ ಪ್ರಕರಣ ದಾಖಲಾಗುತ್ತಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಇತ್ತೀಚೆಗಷ್ಟೇ ದಂಡ ಪಾವತಿ ಮೇಲೆ ಶೇ 50ರಷ್ಟು ರಿಯಾಯಿತಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಹಲವರು ದಂಡ ಪಾವತಿ ಮಾಡಿದ್ದಾರೆ. ಆದರೆ, ಇನ್ನೂ ಕೆಲವರು ದಂಡ ಪಾವತಿ ಮಾಡಿಲ್ಲ. ಹೀಗಾಗಿ, ದಂಡ ಬಾಕಿ ಉಳಿದಿದೆ. ನೋಟಿಸ್ ಸಮೇತ ಮನೆ ಬಾಗಿಲಿಗೆ ಹೋಗಿ ದಂಡ ಸಂಗ್ರಹಿಸಲಾಗುತ್ತಿದೆ’ ಎಂದು ಹೇಳಿದರು.

ಟಾಪ್– 100 ಪಟ್ಟಿ ಸಿದ್ಧ: ಸಂಚಾರ ವಿಭಾಗಕ್ಕೆ ಸಂಬಂಧಪಟ್ಟಂತೆ ನಗರದಲ್ಲಿ 48 ಸಂಚಾರ ಠಾಣೆಗಳಿವೆ. ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಅತೀ ಹೆಚ್ಚು ದಂಡ ಬಾಕಿ ಇರುವ ಟಾಪ್–100 ವಾಹನಗಳ ಮಾಲೀಕರ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿದ್ದಾರೆ.

‘ಕ್ಯಾಮೆರಾ ಫೋಟೊ ಪುರಾವೆಯನ್ನಾಗಿಟ್ಟುಕೊಂಡು ನೋಂದಣಿ ಸಂಖ್ಯೆ ಆಧರಿಸಿ ವಾಹನಗಳ ಮೇಲೆ ದಂಡ ವಿಧಿಸಲಾಗುತ್ತಿದೆ. ಜೊತೆಗೆ, ವಾಹನ ನೋಂದಣಿ ಸಮಯದಲ್ಲಿ ಮಾಲೀಕರು ನೀಡಿರುವ ವಿಳಾಸಕ್ಕೆ ನೋಟಿಸ್‌ ಕಳುಹಿಸಿ, ದಂಡ ಪಾವತಿಸುವಂತೆ ಸೂಚಿಸಲಾಗುತ್ತಿದೆ. ಇಷ್ಟಾದರೂ ಹಲವರು ದಂಡ ಪಾವತಿ ಮಾಡುತ್ತಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಟಾಪ್–100 ಪಟ್ಟಿಯಲ್ಲಿರುವ ವಾಹನಗಳ ಮಾಲೀಕರ ಮನೆಗಳಿಗೆ ಹೋಗಿ ದಂಡ ಸಂಗ್ರಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ನಿಗದಿತ ಸಮಯದಲ್ಲಿ ಪೊಲೀಸರು, ಮನೆಗಳಿಗೆ ಹೋಗಿ ದಂಡ ಸಂಗ್ರಹಿಸುತ್ತಿದ್ದಾರೆ’ ಎಂದರು.

‘ಕೆಲ ಮಾಲೀಕರು, ವಿಳಾಸ ಬದಲಿಸಿದ್ದಾರೆ. ಇನ್ನು ಕೆಲವರು, ತಪ್ಪು ವಿಳಾಸ ನೀಡಿದ್ದಾರೆ. ಉಳಿದಂತೆ ಬಹುತೇಕರು, ವಿಳಾಸದಲ್ಲಿ ಲಭ್ಯರಾಗಿದ್ದಾರೆ. ಅಂಥವರಿಂದ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ. ಹೆಚ್ಚು ದಂಡ ಬಾಕಿ ಉಳಿಸಿಕೊಂಡಿರುವವರು, ನೋಟಿಸ್ ಪಡೆಯುತ್ತಿದ್ದಾರೆ. ನ್ಯಾಯಾಲಯದಲ್ಲಿ ದಂಡ ಪಾವತಿ ಮಾಡುವುದಾಗಿ ಹೇಳುತ್ತಿದ್ದಾರೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

‘ಸಂಚಾರ ಪೊಲೀಸರು, ರಸ್ತೆಯಲ್ಲಿ ನಿಂತು ವಾಹನಗಳನ್ನು ತಪಾಸಣೆ ಮಾಡುವುದು ಕಡಿಮೆಯಾಗಿದೆ. ಇದೇ ಕಾರಣಕ್ಕೆ ಹಲವರು, ದಂಡ ಬಾಕಿ ಇದ್ದರೂ ಪಾವತಿ ಮಾಡುತ್ತಿಲ್ಲ’ ಎಂದು ಅಧಿಕಾರಿ ಹೇಳಿದರು.

ಪೊಲೀಸರ ಕಂಡು ಗಾಬರಿ

ದಂಡ ವಸೂಲಿ ಮಾಡಲು ಪೊಲೀಸರು ಮನೆಗೆ ಬರುತ್ತಿರುವುದನ್ನು ನೋಡಿ ಕೆಲ ಮಾಲೀಕರು ಹಾಗೂ ಅಕ್ಕ–ಪಕ್ಕದ ಮನೆಯವರು ಗಾಬರಿಯಾಗುತ್ತಿದ್ದಾರೆ. ಪೊಲೀಸರ ಹೊಸ ಪ್ರಯತ್ನದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಪ್ರಕಟಿಸಿರುವ ಸಾರ್ವಜನಿಕರು ‘ಮನೆ ಮನೆಗೆ ಬಂದು ದಂಡ ವಸೂಲಿ ಮಾಡುವುದು ಒಳ್ಳೆಯ ತೀರ್ಮಾನ. ಆದರೆ ದಿಢೀರನೇ ಪೊಲೀಸರು ಮನೆಗೆ ಬಂದರೆ ಅಕ್ಕ–ಪಕ್ಕದ ಜನ ಏನಾಯಿತೆಂದು ವಿಚಾರಿಸುತ್ತಿದ್ದಾರೆ. ಪೊಲೀಸರು ಬಂದು ಹೋದ ನಂತರ ಅನುಮಾನಾಸ್ಪದ ರೀತಿಯಲ್ಲಿ ನೋಡುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

₹70 ಸಾವಿರ ಮೌಲ್ಯದ ವಾಹನ; ₹3.25 ಲಕ್ಷ ದಂಡ

ಸಂಚಾರ ನಿಯಮಗಳನ್ನು 643 ಬಾರಿ ಉಲ್ಲಂಘನೆ ಮಾಡಿದ್ದ ದ್ವಿಚಕ್ರ ವಾಹನ ಮಾಲೀಕರೊಬ್ಬರನ್ನು ಪೊಲೀಸರು ಪತ್ತೆ ಮಾಡಿದ್ದು ₹3.25 ಲಕ್ಷ ದಂಡ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ.

‘ಆರ್.ಟಿ. ನಗರ ಬಳಿಯ ಗಂಗಾನಗರದಲ್ಲಿ ಮಾಲಾ ಅವರಿಗೆ ಸೇರಿದ್ದ ದ್ವಿಚಕ್ರ ವಾಹನದ ಮೇಲೆ ₹3.25 ಲಕ್ಷ ದಂಡ ಬಾಕಿ ಇತ್ತು. ವಿಳಾಸಕ್ಕೆ ಹೋಗಿ ವಾಹನವನ್ನು ಜಪ್ತಿ ಮಾಡಲಾಗಿದೆ. ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹೆಲ್ಮೆಟ್ ರಹಿತ ಚಾಲನೆ ಸಿಗ್ನಲ್ ಜಂಪ್ ಸೇರಿದಂತೆ ಹಲವು ಬಾರಿ ನಿಯಮ ಉಲ್ಲಂಘಿಸಲಾಗಿದೆ. ವಾಹನ ಮಾಲೀಕರು ಪೊಲೀಸರ ಕಣ್ತಪ್ಪಿಸಿ ಸುತ್ತಾಡುತ್ತಿದ್ದರು. ಹೀಗಾಗಿ ಇದುವರೆಗೂ ಸಿಕ್ಕಿಬಿದ್ದಿರಲಿಲ್ಲ. ಇದೀಗ ₹70 ಸಾವಿರ ಮೌಲ್ಯದ ದ್ವಿಚಕ್ರ ವಾಹನದ ಮೇಲೆ ₹3.25 ಲಕ್ಷ ದಂಡವಿರುವುದನ್ನು ನೋಡಿ ಆಶ್ಚರ್ಯಗೊಂಡಿರುವ ಮಾಲೀಕರು ಇನ್ನೊಮ್ಮೆ ನಿಯಮ ಉಲ್ಲಂಘನೆ ಮಾಡುವುದಿಲ್ಲವೆಂದು ಹೇಳುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.