
ಬೆಂಗಳೂರು: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್–95 ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಸದಸ್ಯರು ಸೋಮವಾರ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯನಿಧಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕನಿಷ್ಠ ₹7500 ಪಿಂಚಣಿ ಹಾಗೂ ಭತ್ಯೆ, ವೈದ್ಯಕೀಯ ಸೌಲಭ್ಯ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಇಪಿಎಸ್ ವ್ಯಾಪ್ತಿಗೆ ಬಾರದ ಹಲವು ನಿವೃತ್ತ ನೌಕರರಿಗೆ ₹5 ಸಾವಿರ ನೀಡಬೇಕು. ಹತ್ತು ವರ್ಷಗಳಲ್ಲಿ ಲಕ್ಷಾಂತರ ಇಪಿಎಸ್ ನೌಕರರು ವಯೋಸಹಜ ಹಾಗೂ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ನಿವೃತ್ತಿಯಾದ ನೌಕರರಿಗೆ ಆರು ತಿಂಗಳೊಳಗೆ ಪಿಂಚಣಿ ಹೆಚ್ಚಿಸುವಂತೆ 2022ರಲ್ಲಿ ಸುಪ್ರೀಂ ಕೋರ್ಟ್ ಸುನಿಲ್ ಕುಮಾರ್ ಪ್ರಕರಣದಲ್ಲಿ ತೀರ್ಪು ನೀಡಿದೆ. ಆದರೆ, ಇಪಿಎಫ್‌ಒ ಅಧಿಕಾರಿಗಳು ತೀರ್ಪನ್ನು ವಿಭಿನ್ನವಾಗಿ ಅರ್ಥೈಸಿಕೊಂಡು, ಜಂಟಿ ಆಯ್ಕೆ ಪತ್ರ ಸಲ್ಲಿಸಿದ ಇಪಿಎಸ್ ನಿವೃತ್ತರ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಈ ಆದೇಶದ ವಿರುದ್ಧ ತಮಿಳುನಾಡಿನ ಮಧುರೈ ಹೈಕೋರ್ಟ್‌ನಲ್ಲಿ 86 ಜನ ರಿಟ್ ಅರ್ಜಿ ಸಲ್ಲಿಸಿದ್ದರು. ಇಪಿಎಸ್ ನಿವೃತ್ತರಿಗೆ ಅಧಿಕ ಪಿಂಚಣಿ ನೀಡುವಂತೆ ಸೆಪ್ಟೆಂಬರ್ 9ರಂದು ತೀರ್ಪು ನೀಡಿದೆ. ಇದು ನಮಗೂ ಅನ್ವಯವಾಗಲಿದ್ದು, ಕೂಡಲೇ ಅನುಷ್ಠಾನಗೊಳಿಸಬೇಕು’ಎಂದು ಇಪಿಎಸ್–95 ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘದ ಚಂದ್ರೇಗೌಡ ಆಗ್ರಹಿಸಿದರು.
ನವದೆಹಲಿಯಲ್ಲಿ ಜರುಗಿದ 238ನೇ ಸಿಬಿಟಿ ಸಭೆಯಲ್ಲಿ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳು ಪ್ರಸ್ತಾವನೆ ಮಂಡಿಸದೆ, 78 ಲಕ್ಷ ಇಪಿಎಸ್ ನಿವೃತ್ತರನ್ನು ನಿರಾಶೆಗೊಳಿಸಿದ್ದಾರೆ. ನೌಕರರ ಸಂಘದ ಮುಖಂಡರಾದ ಕಮಾಂಡರ್ ಅಶೋಕ್ ರಾವುತ್ ಹಾಗೂ ತಂಡದವರು ಸಿಬಿಟಿ ಅಧ್ಯಕ್ಷರೂ ಆದ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಬೇಡಿಕೆಗಳನ್ನು ಒಳಗೊಂಡ ಮನವಿಪತ್ರ ಸಲ್ಲಿಸಿದರು ಎಂದು ಹೇಳಿದರು.
ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರ ನಡೆದುಕೊಳ್ಳಬೇಕು. ಮಾತು ತಪ್ಪಿದಲ್ಲಿ, ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ನಂಜುಂಡೇಗೌಡ, ಪ್ರಧಾನ ಕಾರ್ಯದರ್ಶಿ ಆರ್.ಸುಬ್ಬಣ್ಣ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.