ADVERTISEMENT

‘ನಗರದ ಶುಚಿತ್ವಕ್ಕಾಗಿ ನಾಗರಿಕರ ಪಾಲ್ಗೊಳ್ಳುವಿಕೆ’– ಆ. 25ರಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 5:17 IST
Last Updated 25 ಆಗಸ್ಟ್ 2021, 5:17 IST

ಬೆಂಗಳೂರು: ‘ಕಸ ನಿರ್ವಹಣೆ ನಿಯಮಗಳು-2016’ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಗರದ ಸಮಾನ ಮನಸ್ಕ ಸ್ವಚ್ಛತಾ ಸ್ವಯಂಸೇವಕರ ಜೊತೆಗೂಡಿ ‘ನಗರದ ಶುಚಿತ್ವಕ್ಕಾಗಿ ನಾಗರೀಕರ ಪಾಲ್ಗೊಳ್ಳುವಿಕೆ’ ಎಂಬ ಕಾರ್ಯಕ್ರಮವನ್ನು ಬಿಬಿಎಂಪಿಯು ರೂಪಿಸಿದೆ.

'ನಮ್ಮ ನಡೆ, ಸ್ವಚ್ಛತೆಯ ಕಡೆ' ಎಂಬ ಗುರಿ ಹಾಗೂ 'ನಮ್ಮ ಕಸ, ನಮ್ಮ ಜವಾಬ್ದಾರಿ' ಎಂಬ ಧ್ಯೇಯವಾಕ್ಯದೊಂದಿಗೆ ಜಾರಿಯಾಗುವ ಈ ಕಾರ್ಯಕ್ರಮಕ್ಕೆ ರಾಜ್ಯ ಮಟ್ಟದ ಕಸ ನಿರ್ವಹಣೆ ಉಸ್ತುವಾರಿ ಸಮಿತಿಯ ಅಧ್ಯಕ್ಷರಾಗಿರುವ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ.ಆಡಿ, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ಬಿಬಿಎಂಪಿ ಆಳಿತಾಧಿಕಾರಿ ‌ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಇದೇ 25ರಂದು ಬೆಳಿಗ್ಗೆ 11ಕ್ಕೆ ಪುರಭವನದ ಬಳಿ ಚಾಲನೆ ನೀಡಲಿದ್ದಾರೆ.

‘ಈ ಕಾರ್ಯಕ್ರಮದಡಿ ನಗರದ ಪ್ರತಿಯೊಂದು ಬೀದಿಗೂ ಸ್ವಯಂಸೇವಕರನ್ನು, ಪ್ರತಿ ಬ್ಲಾಕ್‌ಗೂ ಶುಚಿ ಮಿತ್ರ ಅವರನ್ನು, ವಾರ್ಡ್ ಮತ್ತು ವಿಭಾಗೀಯ ಮಟ್ಟದಲ್ಲಿ ಸಂಯೋಜಕರನ್ನು ಹಾಗೂ ವಲಯ ಮಟ್ಟದಲ್ಲಿ ಅಪೆಕ್ಸ್ ಸಂಯೋಜಕರನ್ನು ನಿಯೋಜಿಸಲಾಗುತ್ತದೆ. ಕಸ ನಿರ್ವಹಣೆ ವಿಚಾರದಲ್ಲಿ ಇವರು ಪಾಲಿಕೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಿದ್ದಾರೆ. ತಮಗೆ ವಹಿಸಲಾದ ಬೀದಿ, ಬ್ಲಾಕ್, ವಾರ್ಡ್, ವಿಭಾಗ ಅಥವಾ ವಲಯ ಮಟ್ಟದಲ್ಲಿ ಸಂಪರ್ಕ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಿದ್ದಾರೆ. ಸಾಮೂಹಿಕ ಪ್ರಚಾರ ಕಾರ್ಯಗಳನ್ನೂ ಕೈಗೊಳ್ಳಲಿದ್ದಾರೆ. ಕಸವನ್ನು ಮೂಲದಲ್ಲಿಯೇ ವಿಂಗಡಿಸಿ ಸಂಗ್ರಹಿಸುವುದರ ಮಹತ್ವದ ಬಗ್ಗೆ ಹಾಗೂ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ವಾರ್ಡ್ ಸಮಿತಿ ಸಭೆಯಲ್ಲಿ ಚರ್ಚಿಸಿ ತಂತ್ರಜ್ಞರ ಸಹಾಯದಿಂದ ಪರಿಹಾರಗಳನ್ನು ಒದಗಿಸಲು ನೆರವಾಗಲಿದ್ದಾರೆ’ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.