ADVERTISEMENT

33 ಕಸ ಪ್ಯಾಕೇಜ್‌ಗೆ 'PF' ಕಂಟಕ: ಕಂತು ಪಾವತಿಸದ ಗುತ್ತಿಗೆದಾರರಿಂದ ಬಿಡ್‌

ಇಂತಹವರಿಗೆ ಯಾವುದೇ ಗುತ್ತಿಗೆ ನೀಡಬಾರದು ಎಂದು ಆದೇಶಿಸಿರುವ ಇಪಿಎಫ್‌

ಆರ್. ಮಂಜುನಾಥ್
Published 15 ನವೆಂಬರ್ 2025, 22:19 IST
Last Updated 15 ನವೆಂಬರ್ 2025, 22:19 IST
ಕರೀಗೌಡ
ಕರೀಗೌಡ   

ಬೆಂಗಳೂರು: ಆರು ಸಾವಿರ ಪೌರ ಕಾರ್ಮಿಕರ ಭವಿಷ್ಯ ನಿಧಿ (ಪಿಎಫ್‌) ಕಂತು ಪಾವತಿಸದ ವಿಷಯ, 33 ಪ್ಯಾಕೇಜ್‌ನ ಘನ ತ್ಯಾಜ್ಯ ವಿಲೇವಾರಿಯ ಟೆಂಡರ್‌ಗೆ ಕಂಟಕವಾಗಲಿದೆ.

ವಿಧಾನಸಭಾ ಕ್ರೇತ್ರವಾರು ಸಮಗ್ರ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಇದ್ದಾಗ ವಾರ್ಷಿಕ ₹544.91 ಕೋಟಿ ಅಂದಾಜು ವೆಚ್ಚದ ಟೆಂಡರ್‌ ಕರೆಯಲಾಗಿತ್ತು. ಹಲವು ರೀತಿಯ ಕಾನೂನು ಸಂಘರ್ಷದ ನಂತರ, ಟೆಂಡರ್ ತೆರೆದು, ಬಿಡ್‌ ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.

ಈ ಸಂದರ್ಭದಲ್ಲೇ, ಪಿಎಫ್‌ ಕಂತು ಪಾವತಿಸದ ತ್ಯಾಜ್ಯ ನಿರ್ವಹಣೆ ಗುತ್ತಿಗೆದಾರರಿಗೆ (‘ಡಿಫಾಲ್ಟ್‌’) ಯಾವುದೇ ಹೊಸ ಟೆಂಡರ್‌ ನೀಡಬಾರದು ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಪ್ರಾದೇಶಿಕ ಆಯುಕ್ತರು ಸೆಪ್ಟೆಂಬರ್ 15ರಂದು ಆದೇಶ ಹೊರಡಿಸಿದ್ದಾರೆ. 33 ಪ್ಯಾಕೇಜ್‌ನಲ್ಲಿ ‘ಡಿಫಾಲ್ಟ್‌’ ಗುತ್ತಿಗೆದಾರರೂ ಬಿಡ್‌ ಸಲ್ಲಿಸಿದ್ದಾರೆ. ಕೆಲವು ಪ್ಯಾಕೇಜ್‌ನಲ್ಲಿ ‘ಡಿಫಾಲ್ಟ್‌’ ಗುತ್ತಿಗೆದಾರರೊಬ್ಬರೇ ಬಿಡ್‌ ಸಲ್ಲಿಸಿದ್ದಾರೆ ಎನ್ನಲಾಗಿದೆ.

ADVERTISEMENT

ಪಿಎಫ್‌ ಪಾವತಿಸದೆ ‘ಡಿಫಾಲ್ಟ್‌’ ಆಗಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿಯೇ ಸವಿವರವಾಗಿ ಕಾರ್ಮಿಕರ ಭವಿಷ್ಯನಿಧಿ ಸಂಘಟನೆಗೆ (ಇಪಿಎಫ್‌) ವರದಿ ಸಲ್ಲಿಸಿತ್ತು. ಯಲಹಂಕ, ಮಹದೇವಪುರ, ಬೊಮ್ಮನಹಳ್ಳಿ, ದಕ್ಷಿಣ ಹಾಗೂ ಪೂರ್ವ ವಲಯದಲ್ಲಿ 34 ಗುತ್ತಿಗೆದಾರರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಿ ಎಂದು ವಿವರವಾದ ಮಾಹಿತಿಯನ್ನೂ ನೀಡಿತ್ತು. ‘ಗುತ್ತಿಗೆದಾರರ ವಿರುದ್ಧ ಕಾನೂನುತ್ಮಕ ಕ್ರಮ ಕೈಗೊಂಡು, ಅವರಿಗೆ ಯಾವುದೇ ಗುತ್ತಿಗೆ ನೀಡಬಾರದು’ ಎಂದು ಜಿಬಿಎಗೆ (ಬಿಬಿಎಂಪಿ) ಇಪಿಎಫ್‌ ಆದೇಶಿಸಿದೆ. ಹೀಗಾಗಿ, ಹೊಸ ಪ್ಯಾಕೇಜ್‌ನಲ್ಲಿ ‘ಡಿಫಾಲ್ಟ್’ ಆಗಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೇ, ಬೇಡವೇ ಎಂಬ ಗೊಂದಲದಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್‌) ಅಧಿಕಾರಿಗಳು ಮುಳುಗಿದ್ದಾರೆ.

‘ಡಿಫಾಲ್ಟ್‌’ ಗುತ್ತಿಗೆದಾರರನ್ನು 33 ಪ್ಯಾಕೇಜ್‌ಗಳ ಟೆಂಡರ್‌ನಿಂದ ಕೈಬಿಡಬೇಕು, ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಲಾಗುತ್ತದೆ’ ಎಂದು ಬೆಂಗಳೂರು ನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು–ಗುತ್ತಿಗೆದಾರರ ಸಂಘ ಹೇಳಿರುವುದರಿಂದ,  ತ್ಯಾಜ್ಯ ವಿಲೇವಾರಿ ಪ್ಯಾಕೇಜ್‌ ಟೆಂಡರ್‌ ಪ್ರಕ್ರಿಯೆ ಅಂತಿಮಗೊಳ್ಳದೆ, ಮತ್ತೆ ಕಾನೂನು ಸಂಘರ್ಷ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪಿಎಫ್‌ ‘ಡಿಫಾಲ್ಟ್‌’ ಗುತ್ತಿಗೆದಾರರ ಬಗ್ಗೆ ಇಪಿಎಫ್‌ ಆದೇಶವನ್ನು ಪರಿಶೀಲಿಸಲಾಗುತ್ತದೆ. ಅಗತ್ಯ ಕ್ರಮ ಕೈಗೊಳ್ಳಲು ಚರ್ಚೆ ನಡೆಸಲಾಗುತ್ತದೆ.
– ಕರೀಗೌಡ, ಸಿಇಒ ಬಿಎಸ್‌ಡಬ್ಲ್ಯುಎಂಎಲ್‌
ಕ್ರಿಮಿನಲ್‌ ಮೊಕದ್ದಮೆ ಹೂಡಲು ಆಗ್ರಹ
‘ಪಿಎಫ್‌ ಪಾವತಿಸದೆ ಕಾನೂನು ಉಲ್ಲಂಘಿಸಿ ಪೌರ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಅಡ್ಡಿಯಾಗಿರುವ ‘ಡಿಫಾಲ್ಟ್‌ ಗುತ್ತಿಗೆದಾರರ’ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಬೆಂಗಳೂರು ನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು–ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌. ಬಾಲಸುಬ್ರಮಣಿಯಂ ಆಗ್ರಹಿಸಿದರು. ‘ಡಿಫಾಲ್ಟ್‌ ಗುತ್ತಿಗೆದಾರರು ಸರ್ಕಾರ ಹಾಗೂ ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಪೌರಕಾರ್ಮಿಕರಿಗೆ ವಂಚಿಸಲಾಗಿದೆ. ಈ ಬಗ್ಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಜಿಬಿಎ ಮುಖ್ಯ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅವರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕಾನೂನಾತ್ಮಕವಾಗಿಯೇ ಹೋರಾಟ ನಡೆಸಲಾಗುತ್ತದೆ’ ಎಂದರು.

ಕ್ರಮಕೈಗೊಳ್ಳಲು ಹೇಳಿದ್ದ ಬಿಬಿಎಂಪಿ

ಪೌರ ಕಾರ್ಮಿಕರಿಗೆ ಪಿಎಫ್‌ ಕಂತು ಪಾವತಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಇಪಿಎಫ್‌ಗೆ ಗುತ್ತಿಗೆದಾರರ ಪಿಎಫ್‌ ಕೋಡ್‌ ವಾರ್ಡ್‌ ಸಂಖ್ಯೆ ಸಹಿತ ಬಿಬಿಎಂಪಿ ಸಲ್ಲಿಸಿದ ಪಟ್ಟಿ ಇಂತಿದೆ.

ಯಲಹಂಕ ವಲಯ: ಕೇಶವ ಎಂಟರ್‌ಪ್ರೈಸಸ್‌ (ವಾರ್ಡ್‌ 2 5) ಕೆ. ಪ್ರಭಾಕರ್‌ (7 8) ಎಚ್‌. ರವೀಂದ್ರ (9).

ಮಹದೇವಪುರ ವಲಯ: ರಾಮಯ್ಯ ಅಜಯ್‌ ಎಂಟರ್‌ಪ್ರೈಸಸ್‌ (52) ನಾಗೇಶ್‌ ರಾಜಣ್ಣ (53) ಹರ್ಷಿತಾ ಎಂಟರ್‌ಪ್ರೈಸಸ್‌ (55) ಎಂ.ಕೆ. ಏಜೆನ್ಸಿಸ್ (54/1) ಕೆ.ಕೆ. ಎಂಟರ್‌ಪ್ರೈಸಸ್ (85) ಆರ್. ಮಧುಸೂಧನ್‌ (149) ಎನ್‌. ಕಾರ್ತಿಕ್‌ ಬಿ.ಎಸ್‌. ಜಗದೀಶ್‌ (131) ಕೆ.ಒ. ಶ್ರೀನಿವಾಸ್‌ (84).

ಬೊಮ್ಮನಹಳ್ಳಿ ವಲಯ: ಲವ ಕುಶ ಟ್ರಾನ್ಸ್‌ಪೋರ್ಟ್‌ (174).

ದಕ್ಷಿಣ ವಲಯ: ಲವ ಕುಶ ಟ್ರಾನ್ಸ್‌ಪೋರ್ಟ್‌ (131) ವಿ.ಕೆ. ಎಂಟರ್‌ಪ್ರೈಸಸ್‌ (165) ರಾಜೇಶ್ವರಿ ಎಂಟರ್‌ಪ್ರೈಸಸ್‌ (156 15 6ಬಿ).

ಪೂರ್ವ ವಲಯ: ಶ್ರೀ ವೆಂಕಯ್ಯಸ್ವಾಮಿ ವಾರಿ ಎಂಟರ್‌ಪ್ರೈಸಸ್‌ (30) ಸಿಎಸ್‌ಆರ್‌ ಎಂಟರ್‌ಪ್ರೈಸಸ್‌ (31) ಎನ್‌. ವೆಂಕಟರಾಮನ್‌ (80 90) ಓಂಶಕ್ತಿ ಎಂಟರ್‌ಪ್ರೈಸಸ್‌ (93) ನಿರಂಜನ್‌ ಎಂಟರ್‌ಪ್ರೈಸಸ್‌ (62 110) ಶ್ರೀ ಮಂಜುನಾಥ ಎಂಟರ್‌ಪ್ರೈಸಸ್‌ (79 91 92) ವಿನಾಯಕ ಎಂಟರ್‌ಪ್ರೈಸಸ್‌ (47 61 78) ಶ್ರೀ ಸಾಯಿ ಕನ್‌ಸ್ಟ್ರಕ್ಷನ್‌ ವಿಷನ್‌ ಮ್ಯಾನ್‌ಪವರ್ ಪ್ರೈ. ಲಿ (181 182 183) ವಿನೋದ್‌ ಏಜೆನ್ಸಿ (123) ಶೋಡಷಿ ಎಂಟರ್‌ಪ್ರೈಸಸ್‌ (20 21) ಶ್ರೀನಿವಾಸ ರೆಡ್ಡಿ (23) ಒಎಲ್‌ಎನ್‌ ಎಂಟರ್‌ಪ್ರೈಸಸ್‌ (50) ವೆಂಕಟೇಶ್‌ (22 23) ರೇಣುಕ ಎಂಟರ್‌ಪ್ರೈಸಸ್‌ (24 29) ಎ.ಕೆ. ಎಂಟರ್‌ಪ್ರೈಸಸ್‌ (116 117)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.