ADVERTISEMENT

ಪಿಎಫ್‌ ಸೊಸೈಟಿ ಅಕ್ರಮ: ಬಿ.ಎಲ್.ಜಗದೀಶ್‌ ಪತ್ನಿ ಖಾತೆಗೆ ₹6.5 ಕೋಟಿ ವರ್ಗಾವಣೆ!

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 0:00 IST
Last Updated 10 ನವೆಂಬರ್ 2025, 0:00 IST
<div class="paragraphs"><p>ಹಣ </p></div>

ಹಣ

   

ಬೆಂಗಳೂರು: ‌ಎಂಪ್ಲಾಯೀಸ್‌ ಪ್ರಾವಿಡೆಂಟ್ ಫಂಡ್‌ (ಇಪಿಎಫ್‌) ಕೋ–ಆಪರೇಟಿವ್ ಸೊಸೈಟಿಯಲ್ಲಿ ನಡೆದ ₹70 ಕೋಟಿ ಮೊತ್ತದ ಅಕ್ರಮದಲ್ಲಿ, ₹6.5 ಕೋಟಿ ನಗದನ್ನು ಸೊಸೈಟಿಯ ಲೆಕ್ಕಾಧಿಕಾರಿ ಬಿ.ಎಲ್.ಜಗದೀಶ್‌ ಅವರ ಪತ್ನಿ ಲಕ್ಷ್ಮೀ ಅವರ ವಿವಿಧ ಬ್ಯಾಂಕ್‌ಗಳ ಖಾತೆಗಳಿಗೆ ವರ್ಗಾವಣೆ  ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಜಗದೀಶ್ ಅವರ ಪತ್ನಿ ಲಕ್ಷ್ಮೀ ಹೆಸರಲ್ಲಿ ಹಲವು ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದ್ದು, 2009 ರಿಂದ 2024ರ ಅವಧಿಯಲ್ಲಿ ಒಟ್ಟು ₹6.5 ಕೋಟಿ ಸೊಸೈಟಿ ಖಾತೆಯಿಂದಲೇ ವರ್ಗಾವಣೆಯಾಗಿದೆ. ಈ ಹಣದಲ್ಲಿ ಲಕ್ಷ್ಮೀ ಅವರು ವಿಲಾಸಿ ಜೀವನ ನಡೆಸುತ್ತಿದ್ದರು. ದುಬಾರಿ ಕಾರು ಹಾಗೂ ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಅವರ ಖಾತೆಯಲ್ಲಿದ್ದ ₹ 20 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಹಣ ವಂಚನೆಯಲ್ಲಿ ಸೊಸೈಟಿಯ ಸಿಇಒ ಜಿ.ಗೋಪಿನಾಥ್ ಅವರ ಪಾತ್ರ ಇರುವುದು ತನಿಖೆ ವೇಳೆ ಗೊತ್ತಾಗಿದ್ದು, ಲೆಕ್ಕಾಧಿಕಾರಿ ಜತೆ ಶಾಮೀಲಾಗಿ ಸೊಸೈಟಿಗೆ ಸೇರಿದ ₹15 ಕೋಟಿಯನ್ನು ಅಕ್ರಮವಾಗಿ ಬಳಸಿಕೊಂಡಿರುವುದು ಗೊತ್ತಾಗಿದೆ.

ಠೇವಣಿದಾರರಿಂದ ಲಕ್ಷಾಂತರ ರೂಪಾಯಿ ನಗದು ಪಡೆದಿರುವ ಗೋಪಿನಾಥ್‌ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಗೋಪಿನಾಥ್‌ ಮತ್ತು ಲಕ್ಷ್ಮೀ ಅವರನ್ನು ನವೆಂಬರ್ 12ರವರೆಗೆ ಕಸ್ಟಡಿಗೆ ಪಡೆದಿದ್ದು, ತನಿಖೆ ನಡೆಸಲಾಗುತ್ತಿದೆ. ಇತರೆ ಆರೋಪಿಗಳಾದ ಜಗದೀಶ್ ಸೇರಿದಂತೆ ಹಲವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.