
ಪಿ.ಜಿ.
ಬೆಂಗಳೂರು: ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ವಿಸ್ ಅಪಾರ್ಟ್‌ಮೆಂಟ್, ಹಾಸ್ಟಲ್ ಮತ್ತು ಪಿ.ಜಿಗಳಲ್ಲಿ ಸುರಕ್ಷತಾ ನಿಯಮಗಳನ್ನು ನಿಗದಿತ ಅವಧಿಯೊಳಗೆ ಪರಿಶೀಲಿಸಿ, ಅಗತ್ಯ ತಿದ್ದುಪಡಿ ಕೈಗೊಳ್ಳಬೇಕು ಎಂದು ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದರು.
ಸಂಸ್ಥೆಗಳ ಮಾಲೀಕರು/ ನಿರ್ವಾಹಕರು/ ವ್ಯವಸ್ಥಾಪಕರಿಗೆ ಈ ಬಗ್ಗೆ ನೋಟಿಸ್ ಜಾರಿ ಮಾಡಲಾಗಿದ್ದು, ನಗರ ಪಾಲಿಕೆಯ ವತಿಯಿಂದ ಸೂಚಿಸಲಾಗಿರುವಹಾಗೂ ಜಾರಿಯಲ್ಲಿರುವ ಎಲ್ಲ ನಿಯಮಗಳನ್ನೂ ಕಡ್ಡಾಯವಾಗಿ ಅನುಸರಣೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.
ಇತ್ತೀಚೆಗೆ ಸಂಭವಿಸಿರುವ ಅನಿಲ ಸ್ಫೋಟ ಹಾಗೂ ಅಗ್ನಿ ಅವಘಡಗಳಂತಹ ದುರಂತಗಳು ಪುನರಾವರ್ತನೆಯಾಗದಂತೆ ತಡೆಯುವುದು ಮತ್ತು ಸಾರ್ವಜನಿಕರ ಜೀವ ಹಾಗೂ ಆಸ್ತಿ ಸುರಕ್ಷತೆಯನ್ನು ಖಚಿತಪಡಿಸುವುದು ಈ ಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು.
ಎಲ್.ಪಿ.ಜಿ./ಅನಿಲ ಸಂಪರ್ಕಗಳ ಸುರಕ್ಷಿತ ಹಾಗೂ ಅಧಿಕೃತ ಬಳಕೆ, ಅಕ್ರಮ ಹಾಗೂ ಅಸುರಕ್ಷಿತ ಅನಿಲ ಸಿಲಿಂಡರ್‌ಗಳ ಸಂಪೂರ್ಣ ನಿಷೇಧ, ಸರಿಯಾದ ಗಾಳಿ ಮತ್ತು ಅಗ್ನಿ ಸುರಕ್ಷತಾ ಕ್ರಮ, ವಿದ್ಯುತ್ ಸುರಕ್ಷತೆ ಹಾಗೂ ಓವರ್‌ಲೋಡ್ ತಪ್ಪಿಸುವ ಕ್ರಮ, ಮಾನ್ಯ ಹಾಗೂ ಅಸ್ತಿತ್ವದಲ್ಲಿರುವ ವ್ಯಾಪಾರ ಪರವಾನಗಿ ಮತ್ತು ಅಗತ್ಯ ನೋಂದಣಿಯನ್ನು ಹೊಂದಿರಬೇಕು.
ಮುಂದಿನ ದಿನಗಳಲ್ಲಿ ನಗರ ಪಾಲಿಕೆ ವತಿಯಿಂದ ವಿಶೇಷ ತಪಾಸಣಾ ಅಭಿಯಾನ ಕೈಗೊಳ್ಳಲಾಗುವುದು. ಸುರಕ್ಷತಾ ನಿಯಮಗಳನ್ನು ಪಾಲಿಸಲು ವಿಫಲವಾದವರ ಆಸ್ತಿಗಳನ್ನು ಜಪ್ತಿ ಮಾಡಿ, ವ್ಯಾಪಾರ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.