ADVERTISEMENT

ಕಳಪೆ ಗುಣಮಟ್ಟದ ಔಷಧ ಪೂರೈಕೆ ತಡೆಗೆ ಕ್ರಮ: ದಿನೇಶ್ ಗುಂಡೂರಾವ್

ಔಷಧ ಉತ್ಪಾದಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ದಿನೇಶ್ ಗುಂಡೂರಾವ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 14:41 IST
Last Updated 22 ನವೆಂಬರ್ 2025, 14:41 IST
ಕಾರ್ಯಾಗಾರದಲ್ಲಿ ದಿನೇಶ್ ಗುಂಡೂರಾವ್ ಮಾತನಾಡಿದರು
ಕಾರ್ಯಾಗಾರದಲ್ಲಿ ದಿನೇಶ್ ಗುಂಡೂರಾವ್ ಮಾತನಾಡಿದರು   

ಬೆಂಗಳೂರು: ‘ಪ್ರಮಾಣಿತ ಗುಣಮಟ್ಟ ಹೊಂದಿರದ ಔಷಧಗಳು ಮಾರುಕಟ್ಟೆ ಪ್ರವೇಶಿಸದಂತೆ ತಡೆಯಲು ಸರ್ಕಾರಿ ಪ್ರಯೋಗಾಲಯಗಳ ಪರೀಕ್ಷಾ ಸಾಮರ್ಥ್ಯ ಹೆಚ್ಚಳ, ಮಾರುಕಟ್ಟೆ ಕಣ್ಗಾವಲಿನಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. 

ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಷನ್‌ನ ಕರ್ನಾಟಕ ಶಾಖೆ, ಕರ್ನಾಟಕ ಡ್ರಗ್ಸ್‌ ಆ್ಯಂಡ್ ಫಾರ್ಮಾಸ್ಯುಟಿಕಲ್ ಮ್ಯಾನುಫ್ಯಾಕ್ಚರ್ಸ್ ಅಸೋಸಿಯೇಷನ್ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು. 

‘ಆಹಾರೋತ್ಪನ್ನ ಸೇರಿ ವಿವಿಧ ವಸ್ತುಗಳಿಗೆ ಸಂಬಂಧಿಸಿದಂತೆ ಬಡವರು, ಮಧ್ಯಮ ವರ್ಗದವರು ಹಾಗೂ ಶ್ರೀಮಂತರ ಆಯ್ಕೆಗಳು ಬೇರೆ ಬೇರೆಯಾಗಿದ್ದರೂ, ಔಷಧದ ವಿಷಯದಲ್ಲಿ ಈ ಆಯ್ಕೆ ಇರುವುದಿಲ್ಲ. ಯಾವುದೇ ಔಷಧದ ಕಾರಣದಿಂದ ಮರಣ ಸಂಭವಿಸಿದರೆ, ಆ ಪ್ರಕರಣವನ್ನು ದತ್ತಾಂಶಕ್ಕೆ ಹೋಲಿಸಿ ವಿನಾಯಿತಿ ನೀಡಲು ಸಾಧ್ಯವಿಲ್ಲ. ಆದ್ದರಿಂದ ಉತ್ಪಾದಕರು ಸರ್ಕಾರದ ಮಾನದಂಡವನ್ನು ಸರಿಯಾಗಿ ಅಳವಡಿಸಿಕೊಳ್ಳಬೇಕು. ರಾಜ್ಯದ ಜನರಿಗೆ ಅತ್ಯುತ್ತಮ ಗುಣಮಟ್ಟದ ಔಷಧ ಸಿಗುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು. 

ADVERTISEMENT

‘ಪ್ರಮಾಣಿತ ಗುಣಮಟ್ಟ ಕಾಯ್ದುಕೊಳ್ಳದ ಔಷಧಗಳ ತಯಾರಿಕಾ ಕಂಪನಿಗಳನ್ನು ಪೂರೈಕೆ ಸರಪಳಿಯಿಂದ ತೆಗೆದು ಹಾಕಲಾಗುವುದು. ಯಾವುದೇ ಒಂದು ಬ್ಯಾಚ್ ಔಷಧ ಪ್ರಮಾಣಿತ ಗುಣಮಟ್ಟ ಕಾಯ್ದುಕೊಳ್ಳದಿದ್ದರೂ ಆ ಔಷಧ ಜನರ ವಿಶ್ವಾಸವನ್ನು ಕಳೆದುಕೊಳ್ಳಲಿದೆ. ಅಷ್ಟೇ ಅಲ್ಲ, ರೋಗಿಗೆ ಹೆಚ್ಚಿನ ಹಾನಿ ಮಾಡುವ ಸಾಧ್ಯತೆಯೂ ಇರುತ್ತದೆ. ಅಸಮರ್ಪಕ ಪರೀಕ್ಷೆ, ದಾಖಲಾತಿಯಲ್ಲಿನ ಲೋಪ ಸೇರಿ ವಿವಿಧ ಕಾರಣಗಳಿಂದ ಪ್ರಮಾಣಿತ ಗುಣಮಟ್ಟ ಹೊಂದಿರದ ಔಷಧಗಳು ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಔಷಧಗಳ ಗುಣಮಟ್ಟ ಪರಿಶೀಲನೆಗೆ ಆದ್ಯತೆ ನೀಡಲಾಗಿದೆ’ ಎಂದರು. 

‘ಕಳಪೆ ಗುಣಮಟ್ಟದ ಔಷಧ ಪೂರೈಕೆ ಮಾಡುವ ಸಂಸ್ಥೆಯ ಪರವಾನಗಿ ರದ್ದುಪಡಿಸುವಿಕೆಯಂತಹ ಕ್ರಮವನ್ನೂ ಕೈಗೊಳ್ಳಲಾಗುವುದು. ಗುಣಮಟ್ಟದ ಔಷಧ ಜನರಿಗೆ ಸಿಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಆದ್ದರಿಂದ ಔಷಧ ತಯಾರಕರು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು. 

ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಷನ್‌ನ ಕರ್ನಾಟಕ ಶಾಖೆ ಅಧ್ಯಕ್ಷ ಡಾ.ಎಂ. ಖಾಲಿದ್ ಅಹ್ಮದ್ ಖಾನ್, ಕಾರ್ಯದರ್ಶಿ ಡಾ.ಬಿ. ರಮೇಶ್, ಕರ್ನಾಟಕ ಡ್ರಗ್ಸ್‌ ಆ್ಯಂಡ್ ಫಾರ್ಮಾಸ್ಯುಟಿಕಲ್ ಮ್ಯಾನುಫ್ಯಾಕ್ಚರ್ಸ್ ಅಸೋಸಿಯೇಷನ್ ಅಧ್ಯಕ್ಷ ಜತೀಶ್ ಶೇಠ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.