ADVERTISEMENT

ಫೇಸ್‌ಬುಕ್, ಇನ್‌ಸ್ಟಾಗ್ರಾಂ ಯುವತಿಯರ ಫೋಟೊ ಮಾರ್ಫ್

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 20:47 IST
Last Updated 12 ಡಿಸೆಂಬರ್ 2023, 20:47 IST
   

ಬೆಂಗಳೂರು: ಸಹೋದ್ಯೋಗಿ ಯುವತಿ ಜೊತೆಗಿನ ಖಾಸಗಿ ಕ್ಷಣಗಳ ಫೋಟೊ ಸೆರೆ ಹಿಡಿದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ಇತ್ತೀಚೆಗೆ ಬಂಧಿಸಲಾಗಿದ್ದ ಮಂಗಳೂರಿನ ಆದಿತ್ಯ (28), ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಯುವತಿಯರ 12,000 ಫೋಟೊ ಕದ್ದು ನಗ್ನ ರೀತಿಯಲ್ಲಿ ಮಾರ್ಫ್‌ ಮಾಡಿದ್ದನೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

‘ನಗರದ ಕಂಪನಿಯೊಂದರಲ್ಲಿ ಆದಿತ್ಯ ಕೆಲಸ ಮಾಡುತ್ತಿದ್ದ. ಈತನ ಕೃತ್ಯದ ಬಗ್ಗೆ ಕಂಪನಿಯ ಕಾನೂನು ವಿಭಾಗದ ಪ್ರತಿನಿಧಿ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿ ಆದಿತ್ಯನನ್ನು ಸೆರೆ ಹಿಡಿಯಲಾಗಿತ್ತು. ಇದೀಗ, ಆತನ ಬಳಿ ಯುವತಿಯರ 12,000 ಫೋಟೊಗಳು ಪತ್ತೆಯಾಗಿವೆ’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದರು.

ಆ್ಯಪ್ ಮೂಲಕ ಮಾರ್ಫ್: ‘ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಯುವತಿಯರು ತಮ್ಮ ಫೋಟೊ ಅಪ್‌ಲೋಡ್ ಮಾಡಿದ್ದರು. ಅದೇ ಫೋಟೊಗಳನ್ನು ಡೌನ್‌ಲೋಡ್ ಹಾಗೂ ಸ್ಕ್ರಿನ್ ಶಾರ್ಟ್ ಮಾಡಿಕೊಳ್ಳುತ್ತಿದ್ದ ಆರೋಪಿ, ಆ್ಯಪ್‌ ಬಳಸಿ ನಗ್ನ ರೀತಿಯಲ್ಲಿ ಮಾರ್ಫ್ ಮಾಡುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಸಹೋದ್ಯೋಗಿ ಯುವತಿ ಜೊತೆ ಸಲುಗೆ ಇಟ್ಟುಕೊಂಡಿದ್ದ ಆದಿತ್ಯ, ಅವರ ಫೋಟೊಗಳನ್ನು ಸೆರೆ ಹಿಡಿದು ಮಾರ್ಫ್ ಮಾಡಿದ್ದ. ಅನುಮಾನಗೊಂಡ ಯುವತಿ, ಆದಿತ್ಯನ ಮೊಬೈಲ್ ಪರಿಶೀಲಿಸಿದ್ದರು. ಅವಾಗಲೇ ಹಲವರು ಯುವತಿಯರ ಫೋಟೊಗಳನ್ನು ನೋಡಿದ್ದರು. ಈ ಬಗ್ಗೆ ಕಂಪನಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ನಂತರವೇ ಕಾನೂನು ವಿಭಾಗದ ಪ್ರತಿನಿಧಿ ಠಾಣೆಗೆ ದೂರು ನೀಡಿದ್ದರು’ ಎಂದು ಹೇಳಿದರು.

ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮಾಹಿತಿ: ‘ಮಾರ್ಫ್ ಮಾಡುತ್ತಿದ್ದ ಫೋಟೊಗಳನ್ನು ಯುವತಿಯರಿಗೆ ಕಳುಹಿಸುತ್ತಿದ್ದ ಆರೋಪಿ, ಹಣಕ್ಕೆ ಬೇಡಿಕೆ ಇರಿಸುತ್ತಿದ್ದ. ಹಣ ನೀಡದಿದ್ದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ಅಪ್‌ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದನೆಂಬ ಮಾಹಿತಿ ಇದೆ’ ಎಂದು ಪೊಲೀಸರು ತಿಳಿಸಿದರು.

‘ಫೋಟೊ ಬಳಸಿಕೊಂಡು ಕೆಲ ಯುವತಿಯರ ಜೊತೆ ಆರೋಪಿ ಸಲುಗೆ ಸಹ ಇಟ್ಟುಕೊಂಡಿದ್ದ. ಸದ್ಯ ಒಬ್ಬ ಯುವತಿ ಮಾತ್ರ ದೂರು ನೀಡಿದ್ದಾರೆ. ಬೇರೆ ಯುವತಿಯರಿಂದ ದೂರು ಪಡೆಯಲು ಪ್ರಯತ್ನಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.