ಬೆಂಗಳೂರು: ನಗರದಲ್ಲಿ ಪ್ರತಿದಿನ ಹತ್ತಾರು ಪಾರಿವಾಳಗಳು ಕಾಯಿಲೆ ಮತ್ತು ವಾಹನಗಳ ಹೊಡೆತ, ಬಲೆಯ ಹಿಡಿತಗಳಿಂದ ಗಾಯಗೊಂಡು ಹಾರಲಾಗದೆ ಜೀವನ್ಮರಣ ಹೋರಾಟ ನಡೆಸುತ್ತಿರುತ್ತವೆ. ಅಂತಹ ಪಾರಿವಾಳಗಳಿಗೆ ಚಿಕಿತ್ಸೆ, ಆರೈಕೆ ನೀಡಿ ಮತ್ತೆ ರೆಕ್ಕೆ ಬಿಚ್ಚಲು ಶಕ್ತಿ ತುಂಬುವ ಕೆಲಸವನ್ನು ರಾಜಾಜಿನಗರದ ‘ಕಬೂತರ್ ದಾನ ಸೇವಾ ಸಮಿತಿ’ ಮಾಡುತ್ತಿದೆ.
ರಾಜಾಜಿನಗರದಲ್ಲಿರುವ ಶ್ರೀ ಶಂಖೇಶ್ವರ್ ಪಾರ್ಶ್ವನಾಥ ಕಬೂತರ್ ದಾನ ಸೇವಾ ಸಮಿತಿಯ ಪಾರಿವಾಳ ಆಸ್ಪತ್ರೆ ಲಕ್ಷಾಂತರ ಪಾರಿವಾಳಗಳಿಗೆ ಮರುಜೀವ ನೀಡಿದೆ. ವಾಹನ ಅಪಘಾತದಿಂದ, ಬಲೆಗಳಿಗೆ ಸಿಲುಕಿ ಅಥವಾ ಬೇರೆ ಪಾರಿವಾಳಗಳೊಂದಿಗಿನ ಕಾದಾಟದಿಂದ ಗಾಯಗೊಂಡಿರುವ ಪಾರಿವಾಳಗಳು, ಕಾಯಿಲೆಗಳಿಂದ ಬಳಲುತ್ತಿರುವ ಪಾರಿವಾಳಗಳಿಗೆ ಇಲ್ಲಿ ಸೂಕ್ತ ಚಿಕಿತ್ಸೆ ನೀಡಿ, ಆರೈಕೆ ಮಾಡಲಾಗುತ್ತದೆ. ಹಾರಬಲ್ಲದು, ಸ್ವತಂತ್ರವಾಗಿ ಬದುಕಬಲ್ಲದು ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಅಂತಹ ಪಾರಿವಾಳವನ್ನು ಉದ್ಯಾನಗಳ ಬಳಿ ಬಿಡಲಾಗುತ್ತದೆ.
ಕೆಲವು ಪಾರಿವಾಳಗಳು ಶಾಶ್ವತವಾಗಿ ಹಾರಲಾಗದ ಸ್ಥಿತಿಯಲ್ಲಿ ಇರುತ್ತವೆ. ಅಂತಹವುಗಳನ್ನು ಆರೈಕೆ ಕೇಂದ್ರದಲ್ಲೇ ಸಾಕಲಾಗುತ್ತದೆ. ಚಿಕಿತ್ಸೆ ಹಂತದಲ್ಲಿ ಅಥವಾ ನಂತರ ಮೃತಪಟ್ಟ ಪಾರಿವಾಳಗಳನ್ನು ಜೈವಿಕ ತ್ಯಾಜ್ಯ ನಿರ್ವಹಣಾ ಸಂಸ್ಥೆಗೆ ನೀಡಿ ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿ ಮಾಡಿಸಲಾಗುತ್ತದೆ.
‘ಪ್ರತಿದಿನ 30ರಿಂದ 50 ಪಾರಿವಾಳಗಳನ್ನು ಸಾರ್ವಜನಿಕರು ಇಲ್ಲಿಗೆ ತಂದುಕೊಡುತ್ತಾರೆ. ಸುಮಾರು ಸಾವಿರಕ್ಕೂ ಅಧಿಕ ಪಾರಿವಾಳಗಳು ಇಲ್ಲಿ ಆರೈಕೆ ಪಡೆಯುತ್ತಿವೆ. ಈವರೆಗೆ ಲಕ್ಷಕ್ಕೂ ಅಧಿಕ ಪಾರಿವಾಳಗಳಿಗೆ ನಮ್ಮ ಸಂಸ್ಥೆ ಆಸರೆಯಾಗಿದೆ’ ಎನ್ನುತ್ತಾರೆ ಸೇವಾ ಸಮಿತಿಯ ಖಜಾಂಚಿ ವಸಂತರಾಜ್ ರಾಂಕ ಸೇಟಿಯ.
ದಾನಿಗಳ ನೆರವಿನಲ್ಲಿ ನಡೆಯುತ್ತಿರುವ ಈ ಸಂಸ್ಥೆಯು ಉಚಿತವಾಗಿ ಪಾರಿವಾಳಗಳ ಆರೈಕೆ ಮಾಡುತ್ತಿದೆ. ಇದಕ್ಕಾಗಿಯೇ ನಾಲ್ಕು ಅಂತಸ್ತಿನ ಕಟ್ಟಡವನ್ನು ಮೀಸಲಿರಿಸಲಾಗಿದ್ದು, ಸುಮಾರು 13 ಮಂದಿ ಈ ಆಸ್ಪತ್ರೆಯ ನಿರ್ವಹಣೆ ಮಾಡುತ್ತಿದ್ದಾರೆ. ವರ್ಷಕ್ಕೆ ಸುಮಾರು ₹60ರಿಂದ ₹70 ಲಕ್ಷವನ್ನು ಪಾರಿವಾಳಗಳಿಗಾಗಿ ವಿನಿಯೋಗಿಸುತ್ತಾರೆ.
ಪಾರಿವಾಳಗಳ ಆರೈಕೆಯ ಜತೆಗೆ ಪ್ರತಿದಿನ ನಗರದ ಹಲವೆಡೆ ಸುಮಾರು 500ರಿಂದ 600 ಕೆ.ಜಿ ಧಾನ್ಯವನ್ನು ಹಾಕುವ ಮೂಲಕ ಪಾರಿವಾಳಗಳ ಪೋಷಣೆಯನ್ನೂ ಮಾಡುತ್ತಿದೆ ಈ ಸಂಸ್ಥೆ.
ಆಸ್ಪತ್ರೆ ಆರಂಭಗೊಂಡಿದ್ದು ಹೇಗೆ:
ಸುಮಾರು 30 ವರ್ಷಗಳ ಹಿಂದೆ ನಗರದೊಳಗೆ ಆಹಾರ ಸಿಗದೇ ಪರದಾಡುತ್ತಿದ್ದ ಪಾರಿವಾಳಗಳನ್ನು ಕಂಡ ಪನ್ನಲಾಲ್ ಜಿ. ಕಟಾರಿಯ ಮತ್ತು ಪುಕ್ಕರಾಜ್ ಜಿ. ರಾಂಕ ಸೇಟಿಯ ಎಂಬ ಇಬ್ಬರು ವರ್ತಕರು ಅವುಗಳಿಗೆ ಆಹಾರ ನೀಡಲು ಆರಂಭಿಸಿದ್ದರು. ತಮ್ಮ ಸ್ವಂತ ಹಣದಿಂದ ಧಾನ್ಯ ನೀಡುತ್ತಿದ್ದ ಅವರಿಗೆ ಧಾನ್ಯದ ಅವಶ್ಯಕತೆ ಹೆಚ್ಚಾಗಿರುವುದು ಅರಿವಿಗೆ ಬಂತು.
ಪಾರಿವಾಳಗಳಿಗೆ ಆಹಾರ ನೀಡಲು ದೇಣಿಗೆಯನ್ನು ಸಂಗ್ರಹಿಸಲು 23 ಸದಸ್ಯರನ್ನೊಳಗೊಂಡ ನೋಂದಾಯಿತ ಸಂಸ್ಥೆಯೊಂದನ್ನು ಆರಂಭಿಸಿ, ಆ ಸಂಸ್ಥೆಗೆ ಶ್ರೀ ಶಂಖೇಶ್ವರ್ ಪಾರ್ಶ್ವನಾಥ ಕಬೂತರ್ ದಾನ ಸೇವಾ ಸಮಿತಿ ಎಂದು ಹೆಸರಿಟ್ಟರು. ಆ ಸಂಸ್ಥೆಯ ಮೂಲಕ ಪಾರಿವಾಳಗಳಿಗೆ ಆಹಾರ ನೀಡುವ ಕಾರ್ಯ ಮುಂದುವರಿಯಿತು.
ಬಳಿಕ ಅವರ ಮಕ್ಕಳು ಆ ಸೇವಾ ಕಾರ್ಯವನ್ನು ಮುಂದುವರಿಸಿದರು. ಸುಮಾರು ಎಂಟು ವರ್ಷಗಳ ಹಿಂದೆ ನಗರದಲ್ಲಿ ಪಾರಿವಾಳಗಳಿಗೆ ಕಾಯಿಲೆಗಳು ಹೆಚ್ಚಾದವು. ಬೇರೆ ಬೇರೆ ಕಾರಣಗಳಿಂದಾಗಿ ಪಾರಿವಾಳಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತ ಬರುವುದನ್ನು ಗಮನಿಸಿದ ಕಬೂತರ್ ದಾನ ಸೇವಾ ಸಮಿತಿಯು ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿತ್ತು. ಕಾಯಿಲೆಯಿಂದ ಬಳಲುವ ಮತ್ತು ಗಾಯಗೊಂಡಿರುವ ಪಾರಿವಾಳಗಳಿಗಾಗಿ ಆಸ್ಪತ್ರೆಯನ್ನು ಆರಂಭಿಸಿತು.
‘ಶಾಂತಿಯ ಸಂಕೇತವಾಗಿರುವ ಪಾರಿವಾಳ ನಿರುಪದ್ರವಿ ಪಕ್ಷಿ. ಹಲವಾರು ಪಕ್ಷಿ ಪ್ರಭೇದಗಳು ಈಗಾಗಲೇ ಭೂಮಿಯಿಂದ ಕಣ್ಮರೆಯಾಗಿದ್ದು, ಪಾರಿವಾಳಗಳು ಆ ಸಾಲಿಗೆ ಸೇರದಂತೆ ಮಾಡುವ ಸಣ್ಣ ಪ್ರಯತ್ನ ನಮ್ಮದು’ ಎನ್ನುತ್ತಾರೆ ವಸಂತರಾಜ್ ರಾಂಕ ಸೇಟಿಯ.
ಸಂಪರ್ಕ ಹೇಗೆ? ಸಾರ್ವಜನಿಕರಿಗೆ ನಗರದಲ್ಲಿ ಎಲ್ಲಾದರೂ ಗಾಯಗೊಂಡ ಅಥವಾ ಕಾಯಿಲೆಯಿಂದ ಬಳಲುತ್ತಿರುವ ಪಾರಿವಾಳಗಳು ಕಂಡರೆ ಅದನ್ನು ಆಸ್ಪತ್ರೆಗೆ ತಂದು ಕೊಡಬಹುದು ಅಥವಾ ಆಟೊ ಮತ್ತು ಬೇರೆ ವಾಹನಗಳ ಮೂಲಕ ಕಳುಹಿಸಿಕೊಡಬಹುದು. ವಿಳಾಸ: ಶ್ರೀ ಶಂಖೇಶ್ವರ್ ಪಾರ್ಶ್ವನಾಥ ಜೈನ್ ಕಬೂತರ್ ದಾನ ಸೇವಾ ಸಮಿತಿ(ರಿ) ನಂ. 343 57 ‘ಡಿ' ಅಡ್ಡರಸ್ತೆ 3ನೇ ಬ್ಲಾಕ್ ರಾಜಾಜಿನಗರ ಬೆಂಗಳೂರು - 560010 ಮೊ.ಸಂ: 9845221309
‘ಇನ್ನಷ್ಟು ಆಸ್ಪತ್ರೆ ಆರಂಭಕ್ಕೆ ಚಿಂತನೆ’
ನಗರದಲ್ಲಿ ಪ್ರತಿನಿತ್ಯ ಹಲವಾರು ಪಾರಿವಾಳಗಳು ತೊಂದರೆಗೆ ಒಳಗಾಗುತ್ತಿವೆ. ಆದರೆ ಇಡೀ ನಗರಕ್ಕೆ ಒಂದೇ ಪಾರಿವಾಳ ಆಸ್ಪತ್ರೆ ಇದೆ. ಕನಿಷ್ಠ ನಾಲ್ಕು ಆಸ್ಪತ್ರೆಗಳ ಅಗತ್ಯ ಇದೆ. ದಾನಿಗಳು ಸಹಕಾರ ನೀಡಿದರೆ. ಇನ್ನೂ ಹೆಚ್ಚಿನ ಪಾರಿವಾಳ ಆಸ್ಪತ್ರೆ ಆರಂಭಿಸುವ ಇಚ್ಛೆ ಹೊಂದಿದ್ದೇವೆ– ವಸಂತರಾಜ್ ರಾಂಕ ಸೇಟಿಯ ಖಜಾಂಚಿ ಶ್ರೀ ಶಂಖೇಶ್ವರ್ ಪಾರ್ಶ್ವನಾಥ ಜೈನ್ ಕಬೂತರ್ ದಾನ ಸೇವಾ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.