ADVERTISEMENT

ರೈತ ಕರೆ ಕೇಂದ್ರಕ್ಕೆ ದೂರುಗಳ ಸುರಿಮಳೆ; ಎಐ ತಂತ್ರಜ್ಞಾನ ಬಳಸುವ ಚಿಂತನೆ

ಪಿ‍ಎಂ ಕಿಸಾನ್‌, ಬೆಳೆ ಸಮೀಕ್ಷೆ ತೊಡಕುಗಳ ಪರಿಹಾರಕ್ಕಾಗಿ 2.41 ಲಕ್ಷ ಕರೆಗಳು

ಖಲೀಲಅಹ್ಮದ ಶೇಖ
Published 12 ಫೆಬ್ರುವರಿ 2026, 0:30 IST
Last Updated 12 ಫೆಬ್ರುವರಿ 2026, 0:30 IST
ಬೆಂಗಳೂರಿನ ಕೃಷಿ ಇಲಾಖೆ ಆಯುಕ್ತರ ಕಚೇರಿಯಲ್ಲಿ ಇರುವ ರೈತ ಕರೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್ 
ಬೆಂಗಳೂರಿನ ಕೃಷಿ ಇಲಾಖೆ ಆಯುಕ್ತರ ಕಚೇರಿಯಲ್ಲಿ ಇರುವ ರೈತ ಕರೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್    
ರೈತ ಕರೆ ಕೇಂದ್ರಕ್ಕೆ ಎಐ ತಂತ್ರಜ್ಞಾನ ಬಳಸುವ ಚಿಂತನೆ  | ನೂತನ ಡ್ಯಾಶ್‌ ಬೋರ್ಡ್‌ ರೂಪಿಸಲು ಬಿಇಎಲ್‌ನೊಂದಿಗೆ ಒಪ್ಪಂದ | ರೈತರ ಎಲ್ಲ ಸಮಸ್ಯೆಗಳಿಗೆ ಒಂದು ವೇದಿಕೆಯಡಿ ಪರಿಹಾರ 

ಬೆಂಗಳೂರು: ‘ಪಿಎಂ–ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವುದು ಹೇಗೆ? ಫಲಾನುಭವಿಗಳ ಪಟ್ಟಿಯಲ್ಲಿ ನಮ್ಮ ಹೆಸರಿದೆ, ಆದರೆ ನನ್ನ ಖಾತೆಗೆ ಹಣ ಜಮೆ ಆಗುತ್ತಿಲ್ಲ? ಬೆಳೆ ಸಮೀಕ್ಷೆ ಮಾಡುವಾಗ ಸರ್ವರ್‌ ಹಾಗೂ ನೆಟ್‌ವರ್ಕ್‌ ಸಮಸ್ಯೆ ಆಗುತ್ತಿದೆ . . .’

ಇದು ರಾಜ್ಯದ ಅನ್ನದಾತರ ಅಳಲುಗಳು. ಇಂತಹ ಸಮಸ್ಯೆಗಳ ಕುರಿತು ನಿತ್ಯ ನೂರಾರು ದೂರುಗಳು ‘ರೈತ ಕರೆ ಕೇಂದ್ರ’ಕ್ಕೆ ಬರುತ್ತಿವೆ.  

ರೈತರಿಗೆ ಮಾಹಿತಿ, ಸಲಹೆ, ಮಾರ್ಗದರ್ಶನ ನೀಡುವ ಉದ್ದೇಶದಿಂದ ಕೃಷಿ ಇಲಾಖೆ 2023ರ ಆಗಸ್ಟ್‌ನಲ್ಲಿ ಏಕೀಕೃತ ಶುಲ್ಕ ರಹಿತ ದೂರವಾಣಿ ಸಂಖ್ಯೆಯನ್ನಾಗಿ (18004253553) ಪರಿವರ್ತಿಸಿ (ಇಂಟಿಗ್ರೇಟೆಡ್‌ ವಾಯ್ಸ್‌ ರೆಸ್ಪಾನ್ಸ್ ಸಿಸ್ಟಂ–ಐವಿಆರ್‌ಎಸ್‌) ರೈತ ಕರೆ ಕೇಂದ್ರಕ್ಕೆ ಚಾಲನೆ ನೀಡಿತ್ತು.

ADVERTISEMENT

ಈ ಸಹಾಯವಾಣಿಗೆ ಕರೆ ಮಾಡುವ ಬಹುತೇಕ ರೈತರು ಪಿಎಂ–ಕಿಸಾನ್‌ ಯೋಜನೆ ಹಾಗೂ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಕೇಳುತ್ತಿದ್ದಾರೆ. 2023ರ ಆಗಸ್ಟ್‌ನಿಂದ 2026ರ ಫೆ.3ರವರೆಗೆ ಬಂದ ಒಟ್ಟು 2,89,552 ಕರೆಗಳ ಪೈಕಿ, 2,41,151 ಕರೆಗಳು ಬೆಳೆ ಸಮೀಕ್ಷೆ, ಪಿಎಂ–ಕಿಸಾನ್‌ಗೆ ಸಂಬಂಧಿಸಿದ್ದಾಗಿವೆ.

‘ಪಿಎಂ ಕಿಸಾನ್‌ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೇಂದ್ರ ಸರ್ಕಾರ ಪ್ರತಿವರ್ಷ ₹6 ಸಾವಿರ ಆರ್ಥಿಕ ನೆರವು ನೀಡುತ್ತಿದ್ದು, ನಾಲ್ಕು ತಿಂಗಳಿಗೊಮ್ಮೆ ₹2 ಸಾವಿರದಂತೆ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್‌ ಖಾತೆಗೆ ವರ್ಗಾಯಿಸುತ್ತಿದೆ. ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿದೆ, ಇ–ಕೆವೈಸಿ ಮಾಡಿಸಿದ್ದೇನೆ. ಆದರೂ‌ ಹಣ ಬಂದಿಲ್ಲ ಎಂದು ರೈತ ಸಹಾಯವಾಣಿಗೆ ನೂರಾರು ಕರೆಗಳು ಬರುತ್ತಿವೆ’ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. 

‘ಈ ಕರೆಗಳಿಗೆ ಸ್ಪಂದಿಸುವ ಕೇಂದ್ರದ ಸಿಬ್ಬಂದಿ ಅವರ ದಾಖಲೆಗಳನ್ನು ಪಡೆದು ಪರಿಶೀಲಿಸುತ್ತಾರೆ. ರೈತರ ಆಧಾರ್ ಕಾರ್ಡ್‌, ಜಮೀನಿನ ಪಹಣಿ, ಬ್ಯಾಂಕ್‌ ಖಾತೆಯಲ್ಲಿ ಇರುವ ಹೆಸರಿನ ಸ್ಪೆಲಿಂಗ್‌ ಒಂದೇ ರೀತಿ ಇರದಿದ್ದರೆ, ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಆಗದಿದ್ದರೆ, ಹಣ ಜಮೆ ಆಗುವುದಿಲ್ಲ. ಈ ದಾಖಲೆಗಳನ್ನು ಸರಿಪಡಿಸಿಕೊಳ್ಳು‌ವಂತೆ ಸಲಹೆ ನೀಡಲಾಗುತ್ತದೆ’ ಎಂದರು.

‘ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಸರ್ವರ್‌ ಬ್ಯುಸಿ, ದತ್ತಾಂಶ ಅಪ್‌ಲೋಡ್‌ ಆಗದಿರುವುದು, ಜಿಪಿಎಸ್‌ ದೋಷಗಳು, ಹಿಸ್ಸಾ ಸಂಖ್ಯೆ ಗುರುತಿಸುವಿಕೆಯಲ್ಲಿ ಆಗುತ್ತಿರುವ ತೊಂದರೆಗಳು, ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಬೆಳೆ ವಿವರ ನಮೂದಿಸುವುದು ಹೇಗೆ ಎಂಬ ಕರೆಗಳು ಬರುತ್ತಿವೆ. ಕೇಂದ್ರದ ಸಿಬ್ಬಂದಿ ಇವುಗಳಿಗೆ ಪರಿಹಾರ ನೀಡುವ ಕೆಲಸ ಮಾಡುತ್ತಿದ್ದಾರೆ’ ಎಂದು ವಿವರಿಸಿದರು. 

‘ದತ್ತಾಂಶ ಸಂಗ್ರಹಕ್ಕೆ ಪ್ರತ್ಯೇಕ ಡ್ಯಾಶ್‌ಬೋರ್ಡ್‌’

‘ಕರೆಗಳ ದತ್ತಾಂಶ ಸಂಗ್ರಹಿಸಲು ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನದೊಂದಿಗೆ ರೈತ ಕರೆ ಕೇಂದ್ರವನ್ನು ಉನ್ನತೀಕರಿಸುವ ಚಿಂತನೆ ಇದೆ. ಈ ಕರೆಗಳ ದತ್ತಾಂಶಗಳನ್ನು ಸಂಗ್ರಹಿಸುವ ಡ್ಯಾಶ್‌ಬೋರ್ಡ್‌ ರೂಪಿಸುವುದಕ್ಕೆ ಭಾರತ್‌ ಎಲೆಕ್ಟ್ರಾನಿಕ್ ಲಿಮಿಟೆಡ್‌ (ಬಿಇಎಲ್‌) ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಎಂದು ಕೃಷಿ ಇಲಾಖೆಯ ನಿರ್ದೇಶಕ ಜಿ.ಟಿ. ಪುತ್ರ ‘ಪ್ರಜಾವಾಣಿ’ಗೆ ತಿಳಿಸಿದರು. 

21 ಸಿಬ್ಬಂದಿ ನಿಯೋಜನೆ

ಈ ಕರೆ ಕೇಂದ್ರ ಬೆಳಿಗ್ಗೆ 8ರಿಂದ ಸಂಜೆ 7 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದು ಇದರ ನಿರ್ವಹಣೆಗಾಗಿ ಒಟ್ಟು 21 ಸಿಬ್ಬಂದಿ ಇದ್ದಾರೆ. ನಿತ್ಯ ಸುಮಾರು 500ಕ್ಕೂ ಹೆಚ್ಚು ಕರೆಗಳು ಬರುತ್ತಿದ್ದು ಇದರಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಗೆ ಹಾಗೂ ಬೆಳೆ ಸಮೀಕ್ಷೆ ಕುರಿತು ಮಾಹಿತಿ ಕೋರಿ ಹೆಚ್ಚು ಕರೆಗಳು ಬರುತ್ತಿವೆ. ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತದೆ. ಇಲ್ಲದಿದ್ದರೆ ಸಂಬಂಧಪಟ್ಟ ವಿಭಾಗದವರಿಂದ ಮಾಹಿತಿ ಪಡೆದು ನೀಡಲಾಗುತ್ತದೆ’ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.