ADVERTISEMENT

ಪೋಕ್ಸೊ ಕೃತ್ಯ ಸಮಾಜ ವಿರೋಧಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 13 ಮೇ 2023, 3:08 IST
Last Updated 13 ಮೇ 2023, 3:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸಮಾಜಕ್ಕೇ ವಿರುದ್ಧವಾದ ಕೃತ್ಯಗಳು‘ ಎಂದು ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಪೊಕ್ಸೊ ಪ್ರಕರಣದ ಆರೋಪಿಯನ್ನು ನಿರಪರಾಧಿ ಎಂದು ತೀರ್ಮಾನಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.

ಪೋಕ್ಸೊ ಪ್ರಕರಣವೊಂದರಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ರಾಜ್ಯ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಕ್ರಿಮಿನಲ್​ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ. ಎಸ್ ಮುದಗಲ್ ಮತ್ತು ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

‘ ಪ್ರಕರಣದಲ್ಲಿ ಆರೋಪಿ ಸಂತ್ರಸ್ತೆಯನ್ನು ಮದುವೆಯಾಗಿದ್ದು, ದಂಪತಿಗೆ ಒಂದು ಮಗು ಇದ್ದರೂ ಶಿಕ್ಷೆಯಿಂದ ವಿನಾಯಿತಿ ಪಡೆಯಲು ಆತ ಅರ್ಹನಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ ಆರೋಪಿಗೆ 7 ವರ್ಷ ಜೈಲು ಶಿಕ್ಷೆ ಮತ್ತು ₹ 50 ಸಾವಿರ ದಂಡ ವಿಧಿಸಿದೆ.

ADVERTISEMENT

’ಘಟನೆ ನಡೆದಾಗ ಸಂತ್ರಸ್ತೆಗೆ 14, ಆರೋಪಿಗೆ 27 ವರ್ಷವಾಗಿತ್ತು. ಘಟನೆ ನಂತರ ಸಂತ್ರಸ್ತೆ ಆರೋಪಿಯ ಜೊತೆಗಿರಲು ಒಪ್ಪಿದ್ದರೂ, ಇದನ್ನು ಒಪ್ಪಿತ ಲೈಂಗಿಕ ಕ್ರಿಯೆ ಎನ್ನಲಾಗದು. ಅಪ್ರಾಪ್ತ ವಯಸ್ಸಿನವರನ್ನು ರಕ್ಷಣೆ ಮಾಡುವುದು ಇಡೀ ಸಮಾಜದ ಕರ್ತವ್ಯವಾಗಿರುತ್ತದೆ‘ ಎಂದು ನ್ಯಾಯಪೀಠ ಹೇಳಿದೆ.

'ಆರೋಪಿಗೆ ಶಿಕ್ಷೆ ವಿಧಿಸಲು ಸಾಕ್ಷ್ಯಾಧಾರಗಳಿದ್ದರೂ, ವಿಚಾರಣಾ ನ್ಯಾಯಾಲಯ, ಅಪಹರಣ, ಲೈಂಗಿಕ ದೌರ್ಜನ್ಯ ಸಾಬೀತಾಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದಿರುವುದು ಪೋಕ್ಸೊ ಕಾಯ್ದೆ-2012ರ ಕಲಂ 4, 6, 29, 30 ಹಾಗೂ ಸುಪ್ರೀಂ ಕೋರ್ಟ್‌ನ ತೀರ್ಪುಗಳಿಗೆ ವಿರುದ್ಧವಾಗಿದೆ‘ ಎಂದು ಆದೇಶದಲ್ಲಿ ವಿವರಿಸಿದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.