ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಅವರು ಕಾವ್ಯ ದೀವಟಿಗೆ ಬೆಳಗುವುದರ ಮೂಲಕ ಕಾವ್ಯ ಸಂಸ್ಕೃತಿ ಯಾನ ಉದ್ಘಾಟಿಸಿದರು.
ಬೆಂಗಳೂರು: ‘ಸಮಾಜದಲ್ಲಿ ಅನೇಕ ವಿಷಯಗಳಿಗೆ ಮೌನ ಆವರಿಸಿಕೊಂಡಿದೆ. ಆ ಮೌನಕ್ಕೆ ಕಾವ್ಯದ ಮೂಲಕ ಧ್ವನಿಯಾಗಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ರಂಗಮಂಡಲ, ರಂಗವಾಹಿನಿ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
‘ಕಾವ್ಯ ಜನಸಾಮಾನ್ಯರ ಧ್ವನಿಯಾಗಬೇಕು. ಹಿಂದೆ ಜನಪದ ಕಾವ್ಯಗಳಲ್ಲಿ ಜನಸಾಮಾನ್ಯರು ತಮಗೆ ಅನಿಸಿದ್ದನ್ನು ಅಭಿವ್ಯಕ್ತಿಗೊಳಿಸಿದ್ದರು. ಶಿಕ್ಷಣ ಎಲ್ಲೆಡೆ ವ್ಯಾಪಿಸಿಕೊಂಡಾಗ ಹಲವು ವಿಷಯಗಳನ್ನು ಹೇಳಲು ಪ್ರಾರಂಭ ಮಾಡಿದರು. ಕೆಲವು ವಿಷಯಗಳಿಗೆ ಮಾತಾದರೆ, ಅನೇಕ ವಿಷಯಗಳಿಗೆ ಮೌನವಾದರು. ಎಲ್ಲೆಲ್ಲಿ ಮೌನವಿದೆಯೋ ಅದಕ್ಕೆ ಮಾತು ನೀಡುವ ಕೆಲಸವಾಗಬೇಕು. ನಮ್ಮ ಕಣ್ಣುಗಳಿಗೆ ಕಾಣದ, ಕಿವಿಗಳಿಗೆ ಕೇಳಿಸದ ವಾತಾವರಣವನ್ನು ಅಧಿಕಾರಶಾಹಿಗಳು ಸೃಷ್ಟಿಸುತ್ತಿವೆ. ಭ್ರಮೆಗಳನ್ನು ಬಿತ್ತಲಾಗುತ್ತಿದೆ. ಆದ್ದರಿಂದ ಕವಿಗಳು ಕಾಲಕ್ಕೆ ಧ್ವನಿಯಾಗಬೇಕು’ ಎಂದು ಹೇಳಿದರು.
‘ಕನ್ನಡ ಸಾಹಿತ್ಯವು ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಬಂದಿದೆ. ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಹಲವರು ಕಾವ್ಯದ ಮೂಲಕ ಸಾಮಾಜಿಕ ಹೊಣೆಗಾರಿಕೆ ತೋರಿಸುತ್ತಾ ಬಂದಿದ್ದಾರೆ. ಇದರಿಂದಾಗಿಯೇ ಕುಮಾರವ್ಯಾಸ ಸೇರಿ ಹಲವರು ಇವತ್ತಿಗೂ ಪ್ರಸ್ತುತವಾಗುತ್ತಾರೆ. ಕಾಲ ಬದಲಾದಂತೆ ಸವಾಲುಗಳು, ತಲ್ಲಣಗಳು ಬೇರೆ ಬೇರೆಯಾಗಿರುತ್ತದೆ. ಇದಕ್ಕೆ ಲೇಖಕರು ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ. ರಾಜಧಾನಿಯಲ್ಲಿ ಇರುವವರು ಮಾತ್ರ ಲೇಖಕರಲ್ಲ, ಹಳ್ಳಿಗಳಲ್ಲಿಯೂ ಬೇರೆ ಬೇರೆ ಮಾಧ್ಯಮಗಳಲ್ಲಿ ಲೇಖಕರು ಬರೆಯುತ್ತಿದ್ದಾರೆ’ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ, ‘ಕವಿತೆ ಅಂತರಾಳಕ್ಕೆ ತಾಕಬೇಕು. ಈ ಸಂದರ್ಭದಲ್ಲಿ ಸಮಾನತೆ, ಸೌಹಾರ್ದ ಸಾರುವ ಕವಿತೆಗಳು ಅಗತ್ಯ’ ಎಂದು ತಿಳಿಸಿದರು.
ರಂಗಕರ್ಮಿ ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ‘ಬದಲಾದ ಸಂದರ್ಭದಲ್ಲಿ ರೈತರು ಸಮಸ್ಯೆ ಎದುರಿಸುತ್ತಿದ್ದು, ಹಳ್ಳಿಗಳು ನಾಶವಾಗುತ್ತಿವೆ. ಈ ವೇಳೆ ಏನನ್ನು ಬರೆಯಬೇಕು? ಏಕೆ ಬರೆಯಬೇಕು? ಯಾರಿಗಾಗಿ ಬರೆಯಬೇಕು ಎಂಬ ಪ್ರಶ್ನೆಗಳು ಕಾಡುತ್ತಿವೆ. ಈ ತಲ್ಲಣದ ಸ್ಥಿತಿಯಲ್ಲಿ ಕಾವ್ಯದ ವಸ್ತು ಏನಾಗಬೇಕು ಎಂಬ ಪ್ರಶ್ನೆಯೂ ಇದೆ. ಕವಿಗಳ ಮೇಲೆ ದೊಡ್ಡ ಜವಾಬ್ದಾರಿಯಿದೆ’ ಎಂದು ಹೇಳಿದರು.
ಬಿ.ಎಂ.ಹನೀಫ್, ಎಂ.ಎಸ್. ಮೂರ್ತಿ, ಸುಬ್ಬು ಹೊಲೆಯಾರ್, ಟಿ.ಎಸ್. ವಿವೇಕಾನಂದ, ಎಸ್. ರಂಗಸ್ವಾಮಿ, ಜಯಲಕ್ಷ್ಮಿ ಪಾಟೀಲ, ದೋಚಿ ಗೌಡ ಕವಿತೆ ವಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.