ADVERTISEMENT

ಬೆಂಗಳೂರು: ಔಷಧ ಅಂಗಡಿ ಮಾಲೀಕನಿಗೆ ವಂಚಿಸಿದ ಆರೋಪ;ಮೂವರು ಕಾನ್‌ಸ್ಟೆಬಲ್‌ಗಳ ಬಂಧನ

​ಪ್ರಜಾವಾಣಿ ವಾರ್ತೆ
Published 5 ಮೇ 2025, 16:11 IST
Last Updated 5 ಮೇ 2025, 16:11 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಔಷಧ ಅಂಗಡಿ ಮಾಲೀಕನಿಗೆ ವಂಚಿಸಿದ ಆರೋಪದ ಮೇಲೆ ಮೂವರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ADVERTISEMENT

ದಾವಣಗೆರೆಯ ಹೆಡ್ ಕಾನ್‌ಸ್ಟೆಬಲ್ ಮಾರುತಿ ಮತ್ತು ಬೆಂಗಳೂರಿನ ಆರ್.ಟಿ.ನಗರ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಯುವರಾಜ್ ಮತ್ತು ಮೆಹಬೂಬ್ ಬಂಧಿತರು. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾರುತಿ ಅವರು ಈಗಾಗಲೇ ಅಮಾನತಗೊಂಡಿದ್ದು, ಹಿಂದೆ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹೇಳಿದರು.

ಈ ಮೂವರು ಆರೋಪಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಿವಾಸಿ ಜೆ. ತಬ್ರೇಜ್ (26) ಅವರನ್ನು ವಂಚಿಸಿದ್ದಾರೆ ಎಂದರು.

‘ನನ್ನ ಅಂಗಡಿಗೆ ಮಾತ್ರೆ ತೆಗೆದುಕೊಳ್ಳಲು ಬಂದಿದ್ದ ದಾವಣಗೆರೆಯ ರಮೇಶ್, ತಮ್ಮ ಪರಿಚಯ ಮಾಡಿಕೊಂಡಿದ್ದ. ನಮ್ಮ ಊರಿನಲ್ಲಿ ತಾತ, ಜಮೀನಿನಲ್ಲಿ ಉಳುಮೆ ಮಾಡುವಾಗ 4 ಕೆ.ಜಿ ಚಿನ್ನದ ನಾಣ್ಯ ಸಿಕ್ಕಿವೆ. ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಆಸಕ್ತಿ ಇದ್ದರೆ ದಾವಣಗೆರೆ ಬಸ್ ನಿಲ್ದಾಣಕ್ಕೆ ಬರುವಂತೆ ಸೂಚಿಸಿದ್ದ’ ಎಂದು ತಬ್ರೇಜ್ ದೂರಿನಲ್ಲಿ ತಿಳಿಸಿದ್ದಾರೆ. 

‘ಮಾರ್ಚ್ 13ರಂದು ಬಸ್‌ನಲ್ಲಿ ದಾವಣಗೆರೆಗೆ ಹೋದಾಗ ತಾತ ಮತ್ತು ಮೊಮ್ಮಗ ಭೇಟಿಯಾಗಿ ನಕಲಿ ಚಿನ್ನದ ನಾಣ್ಯ ತೋರಿಸಿ, ಇದರ ಮೌಲ್ಯ ₹80 ಲಕ್ಷ ಆಗಲಿದೆ ಎಂದರು. ಅಷ್ಟು ಹಣ ನನ್ನ ಬಳಿ ಇಲ್ಲದ ಕಾರಣ ₹10 ಲಕ್ಷಕ್ಕೆ ಕೊಡುವಂತೆ ಕೋರಿದೆ. ಆಗ ಅವರು ₹1,001 ಪಡೆದು ಸಣ್ಣ ನಾಣ್ಯ ಕೊಟ್ಟು ಕಳುಹಿಸಿದರು. ಅದನ್ನು ತಂದು ದೇವನಹಳ್ಳಿಯಲ್ಲಿ ಪರೀಕ್ಷಿಸಿದಾಗ, ಅಸಲಿ ಎಂಬುದು ಗೊತ್ತಾಯಿತು. ಬಳಿಕ ನನ್ನ ಬಳಿಯಿದ್ದ ₹ 10 ಲಕ್ಷ ಮತ್ತು ಕೈ ಸಾಲ ₹ 2 ಲಕ್ಷ ಪಡೆದು ದಾವಣಗೆರೆಗೆ ಹೋಗಿ 2 ಕೆ.ಜಿ. ಚಿನ್ನದ ನಾಣ್ಯ ಖರೀದಿಸಿಕೊಂಡು ಬಂದು, ದೇವನಹಳ್ಳಿಗೆ ಬಂದ ಮೇಲೆ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ನಂತರ ಆರ್‌.ಟಿ.ನಗರ ಠಾಣೆಯ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಕರೆ ಮಾಡಿ, ‘ನೀವು ಚಿನ್ನದ ನಾಣ್ಯಕ್ಕಾಗಿ ₹12 ಲಕ್ಷ ಹಣ ಕಳೆದುಕೊಂಡಿರುವ ವಿಚಾರ ಗೊತ್ತಾಗಿದೆ. ಠಾಣೆ ಬಳಿ ಬರುವಂತೆ ಹೇಳಿದರು. ಅದರಂತೆ ಠಾಣೆ ಬಳಿಯ ಹೋಟೆಲ್‌ವೊಂದರಲ್ಲಿ ಅವರನ್ನು ಭೇಟಿ ಮಾಡಿ ವಿಚಾರ ತಿಳಿಸಿದೆ’ ಎಂದರು. 

‘ಒಂದು ತಿಂಗಳ ಬಳಿಕ ನನಗೆ ಕರೆ ಮಾಡಿದ ಆರ್.ಟಿ.ನಗರ ಕಾನ್‌ಸ್ಟೆಬಲ್‌ಗಳು, ₹12 ಲಕ್ಷಗಳಲ್ಲಿ ₹ 8 ಲಕ್ಷ ಮಾತ್ರ ಜಪ್ತಿ ಮಾಡಿದ್ದು, ಇದರಲ್ಲಿ ₹ 2 ಲಕ್ಷ ಮಾಹಿತಿದಾರರಿಗೆ ನೀಡಿದ್ದಾಗಿ ಹೇಳಿದರು. ಹಣ ಜಪ್ತಿ ಮಾಡಲು ಸಹಕರಿಸಿದ ದಾವಣಗೆರೆಯ ಪೊಲೀಸ್ ಕಾನ್‌ಸ್ಟೆಬಲ್ ಮೂರ್ತಿ ಅವರಿಗೆ ₹75 ಸಾವಿರ ಕೊಡಿಸಿದರು. ಆರ್.ಟಿ.ನಗರದ ಇಬ್ಬರು ಕಾನ್‌ಸ್ಟೆಬಲ್‌ಗಳು ₹75 ಸಾವಿರ ಪಡೆದುಕೊಂಡರು. ನನಗೆ ವಂಚನೆ ಮಾಡಿರುವ ರಮೇಶ್, ಮೆಹಬೂಬ್, ಯುವರಾಜ್, ಮೂರ್ತಿ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ’ ಎಂದು  ದೂರಿನಲ್ಲಿ ವಿವರಿಸಿದ್ದಾರೆ. 

ತಬ್ರೇಜ್ ಅವರು ಪ್ರಕರಣ ದಾಖಲಿಸದ ಕಾರಣ ಮಾರುತಿ ಅವರು ₹ 12 ಲಕ್ಷಗಳಲ್ಲಿ ₹ 8 ಲಕ್ಷಗಳನ್ನು ರಮೇಶ್‌ನಿಂದ ವಶಪಡಿಸಿಕೊಂಡಿದ್ದಾರೆ. ಉಳಿದ ₹4.5 ಲಕ್ಷ ಗಳನ್ನು ತಬ್ರೇಜ್‌ಗೆ ನೀಡಿರುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.