ADVERTISEMENT

ಹಲ್ಲೆ ವಿಡಿಯೊ ವೈರಲ್ ಪ್ರಕರಣ : ಮಿನಿ ಟ್ರಕ್ ಚಾಲಕನ ವಿರುದ್ಧವೇ ಎಫ್‌ಐಆರ್ !

ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ- ಎಸ್‌.ಜೆ.ಪಾರ್ಕ್‌ ಪೊಲೀಸರಿಂದ ದಾಖಲು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 5:45 IST
Last Updated 22 ಸೆಪ್ಟೆಂಬರ್ 2019, 5:45 IST
ಚಾಲಕನ ಮೇಲೆ ಹಲ್ಲೆ ಮಾಡಿದ ಹೆಡ್‌ ಕಾನ್‌ಸ್ಟೆಬಲ್ ಮಹಾಸ್ವಾಮಿ
ಚಾಲಕನ ಮೇಲೆ ಹಲ್ಲೆ ಮಾಡಿದ ಹೆಡ್‌ ಕಾನ್‌ಸ್ಟೆಬಲ್ ಮಹಾಸ್ವಾಮಿ   

ಬೆಂಗಳೂರು: ತಪಾಸಣೆ ನೆಪದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದ ವಿಡಿಯೊವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ ಮಿನಿ ಟ್ರಕ್‌ ಚಾಲಕನ ವಿರುದ್ಧವೇ ಎಸ್‌.ಜೆ.ಪಾರ್ಕ್ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಪುರಭವನ ಎದುರು ಶುಕ್ರವಾರ ಮಧ್ಯಾಹ್ನ ನಡೆದ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಿನಿ ಟ್ರಕ್ ಚಾಲಕನ ಮೇಲೆ ಹಲ್ಲೆ ಮಾಡಿದ್ದ ಹಲಸೂರು ಗೇಟ್ ಹೆಡ್‌ ಕಾನ್‌ಸ್ಟೆಬಲ್‌ ಮಹಾಸ್ವಾಮಿ ಅವರನ್ನು ಸೇವೆಯಿಂದ ವಜಾ ಮಾಡುವಂತೆ ಜನ ಒತ್ತಾಯಿಸಿದ್ದರು.

ಅದರ ನಡುವೆಯೇ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕನ ವಿಳಾಸ ಪತ್ತೆ ಮಾಡಿ ವಿಚಾರಣೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ‘ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಹೆಡ್‌ ಕಾನ್‌ಸ್ಟೆಬಲ್ ಮಹಾಸ್ವಾಮಿ ದೂರು ನೀಡಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ (ಐಪಿಸಿ 353) ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಎಸ್‌.ಜೆ. ಪಾರ್ಕ್ ಪೊಲೀಸರು ಹೇಳಿದರು.

ಪರಾರಿ ಆರೋಪ: ‘ಪುರಭವನ ಎದುರು ಮಿನಿ ಟ್ರಕ್‌ ತಡೆದಿದ್ದಹೆಡ್‌ ಕಾನ್‌ಸ್ಟೆಬಲ್, ತಪಾಸಣೆ ನಡೆಸಿದ್ದರು. ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಡಿ ಟ್ರಕ್‌ ಹತ್ತಿ ಕುಳಿತು ಚಾಲಕನನ್ನು ಠಾಣೆಗೆ ಕರೆದೊಯ್ಯುತ್ತಿದ್ದರು. ಮಾರ್ಗಮಧ್ಯೆ ನಡೆದಿರುವ ಘಟನೆಯೇ ವಿಡಿಯೊದಲ್ಲಿ ಸೆರೆಯಾಗಿದೆ. ಆ ಬಗ್ಗೆ ಸದ್ಯಕ್ಕೆ ಹೆಚ್ಚು ಪ್ರತಿಕ್ರಿಯಿಸಲಾಗದು’ ಎಂದು ಪೊಲೀಸರು ಹೇಳಿದರು.

‘ವಿಡಿಯೊ ಚಿತ್ರೀಕರಿಸಿಕೊಂಡ ಬಳಿಕ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಹೆಡ್‌ ಕಾನ್‌ಸ್ಟೆಬಲ್ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಚಾಲಕನ ಮೇಲೆ ಹೆಡ್ ಕಾನ್‌ಸ್ಟೆಬಲ್ ಹಲ್ಲೆ ಮಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಚಾಲಕ ದೂರು ನೀಡಿದರೆ, ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸರು ಹೇಳಿದರು.

ಲಕ್ಷಾಂತರ ಜನರಿಂದ ವೀಕ್ಷಣೆ: ಚಾಲಕನ ಮೇಲೆ ಹೆಡ್‌ ಕಾನ್‌ಸ್ಟೆಬಲ್ ಹಲ್ಲೆ ಮಾಡಿರುವ ಘಟನೆಯ ವಿಡಿಯೊವನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ‘ಪೀಸ್ ಆಟೊ’ ಸೇರಿದಂತೆ ಹಲವು ಖಾತೆಗಳಲ್ಲಿ ವಿಡಿಯೊವನ್ನು ಅಪ್‌ಲೋಡ್‌ ಮಾಡಲಾಗಿದೆ.

ವಿಡಿಯೊ ಪೋಸ್ಟ್‌ ಅನ್ನು ಸಾವಿರಾರು ಮಂದಿ ಶೇರ್ ಮಾಡಿದ್ದಾರೆ. ಹೆಡ್‌ ಕಾನ್‌ಸ್ಟೆಬಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾಮೆಂಟ್ ಸಹ ಮಾಡಿದ್ದಾರೆ.

**

ಹೆಡ್‌ ಕಾನ್‌ಸ್ಟೆಬಲ್ ವಿರುದ್ಧ ಕ್ರಮವೇಕಿಲ್ಲ?

‘ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಹೆಡ್‌ ಕಾನ್‌ಸ್ಟೆಬಲ್, ಚಾಲಕನ ಮೇಲೆ ಹಲ್ಲೆ ಮಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಅಷ್ಟಾದರೂ ಹೆಡ್‌ ಕಾನ್‌ಸ್ಟೆಬಲ್ ವಿರುದ್ಧ ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಲ್ಲ ಏಕೆ’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಂಚಾರ ವಿಭಾಗದ ಡಿಸಿಪಿ ಜಗದೀಶ್, ‘ಘಟನೆ ಬಗ್ಗೆ ಎಸಿಪಿಯಿಂದ ವರದಿ ಕೇಳಿದ್ದೇನೆ. ಇದುವರೆಗೂ ವರದಿ ಬಂದಿಲ್ಲ. ಬಂದ ನಂತರ ಮಾತನಾಡುವೆ’ ಎಂದರು.

ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾದ ಬಗ್ಗೆ ಪ್ರಶ್ನಿಸಿದಾಗ, ‘ಆ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಹೇಳಿದರು.

ಕ್ರಮ ಕೈಗೊಳ್ಳುವೆ: ಕಮಿಷನರ್

‘ಹೆಡ್‌ ಕಾನ್‌ಸ್ಟೆಬಲ್‌ ಹಾಗೂ ಮಿನಿ ಟ್ರಕ್‌ ಚಾಲಕನ ನಡುವಣ ಚಕಮಕಿ ಕುರಿತು ಸಮಗ್ರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಇದು ಒತ್ತಡದಲ್ಲಿ ನಡೆದಿರುವ ಚಕಮಕಿ. ಇಬ್ಬರೂ ತಾಳ್ಮೆ ಕಳೆದುಕೊಂಡು ವರ್ತಿಸಿರುವುದು ಮೇಲ್ನೋಟಕ್ಕೆ ಕಾಣುವಂತಿದೆ’ ಎಂದು ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಹೇಳಿದ್ದಾರೆ.

‘ಹೆಡ್‌ ಕಾನ್‌ಸ್ಟೆಬಲ್‌ ವರ್ತನೆಯನ್ನು ನಾನು ಒಪ್ಪುವುದಿಲ್ಲ. ಕೆಲಸ ಮಾಡುವ ಸಂದರ್ಭದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಬಾರದು. ಇದು ಕಾನೂನಷ್ಟೇ ಅಲ್ಲ, ಕರ್ತವ್ಯವೂ ಹೌದು. ತಪ್ಪು ಮಾಡಿದ್ದರೆ ಖಂಡಿತಾ ಕ್ರಮ ಕೈಗೊಳ್ಳಲಾಗುವುದು. ಆದರೆ, ಸಾರ್ವಜನಿಕರೂ ಸಂಚಾರ ನಿಯಮ ಪಾಲಿಸಬೇಕು. ಸಮವಸ್ತ್ರ, ಸೀಟ್‌ ಬೆಲ್ಟ್‌ ಧರಿಸಿರಬೇಕು’ ಎಂದು ಕಮಿಷನರ್‌ ತಿಳಿಸಿದ್ದಾರೆ.
**

ಜಾಲತಾಣಗಳಲ್ಲಿ ಕಂಡಿದ್ದು:

ದಿನೇ ದಿನೇ ಸಂಚಾರ ಪೊಲೀಸರ ಹಾವಳಿ ಜಾಸ್ತಿ ಆಗಿದೆ. ಬಡ ಚಾಲಕರು ಬದುಕೋದು ಕಷ್ಟವಾಗಿದೆ. ತಾಯಿಯನ್ನು ಬೈಯುವ ಇಂಥ ಹೆಡ್‌ ಕಾನ್‌ಸ್ಟೆಬಲ್ ನಮಗೆ ಬೇಕೇ?
ಮಹೇಶ್ ಗೌಡ

**

ಇಂಥ ಹೆಡ್‌ ಕಾನ್‌ಸ್ಟೆಬಲ್‌ನಿಂದ ಇಡೀ ಪೊಲೀಸ್ ವ್ಯವಸ್ಥೆಗೆ ಕೆಟ್ಟ ಹೆಸರು. ಈತನನ್ನು ಈಗಲೇ ಕೆಲಸದಿಂದ ತೆಗೆದುಹಾಕಿ
– ರಾಘವ್ ಸಾಗರ್

**

ಗೃಹ ಸಚಿವ ಹಾಗೂ ಪೊಲೀಸ್ ಕಮಿಷನರ್ ಏನು ಮಾಡುತ್ತಿದ್ದಾರೆ. ಹೆಡ್‌ ಕಾನ್‌ಸ್ಟೆಬಲ್ ಪರ ನಿಂತಿದ್ದಾರಾ?
– ಎಸ್. ಗಂಗಾಧರ್

**

ಅಧಿಕಾರದ ದರ್ಪದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಆತನನ್ನು ಅಮಾನತು ಮಾಡಿ ಮನೆಗೆ ಕಳುಹಿಸಿ. ಅವಾಗಲೇ ಬುದ್ಧಿ ಬರುತ್ತದೆ.
– ಸಂದೀಪ್ ಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.