ADVERTISEMENT

ಕರ್ಫ್ಯೂ ಅವಧಿಯಲ್ಲಿ ವೇಷ ಮರೆಸಿಕೊಂಡು ಓಡಾಡಿದರೆ ಬಂಧನ: ಪೊಲೀಸ್‌ ಇಲಾಖೆ

ಇಂದು, ನಾಳೆ ಕರ್ಫ್ಯೂ; ನಗರದಲ್ಲಿ ಪೊಲೀಸರ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 21:04 IST
Last Updated 23 ಏಪ್ರಿಲ್ 2021, 21:04 IST
   

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ಕರ್ಫ್ಯೂ ಜಾರಿ ಮಾಡಲಾಗಿದ್ದು, ನಿಯಮ ಉಲ್ಲಂಘಿಸುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.

ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲ ರಸ್ತೆಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ರಾಜ್ಯ ಮೀಸಲು ಪಡೆಯ ಪೊಲೀಸರನ್ನು ಹಾಗೂ ಸ್ವಯಂಸೇವಕರನ್ನೂ ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತಿದೆ.

ಆಯಾ ವಿಭಾಗಗಳ ಭದ್ರತೆ ಹಾಗೂ ಇತರೆ ಕ್ರಮಗಳ ಜವಾಬ್ದಾರಿಯನ್ನು ಡಿಸಿಪಿಗಳಿಗೆ ವಹಿಸಲಾಗಿದೆ. ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳ ಸಭೆ ನಡೆಸಿರುವ ಡಿಸಿಪಿಗಳು, ಪ್ರತಿ ಠಾಣೆ ವ್ಯಾಪ್ತಿಯಲ್ಲೂ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ. ಠಾಣೆ ವ್ಯಾಪ್ತಿಯಲ್ಲಿ ಗಸ್ತು ತಿರುಗಲಿರುವ ಪೊಲೀಸರು, ನಿಯಮ ಉಲ್ಲಂಘಿಸುವವರನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ.

ADVERTISEMENT

ಕರ್ಫ್ಯೂ ಬಗ್ಗೆ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ‘ಕೆಲ ಸೇವೆಗಳಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ. ಅಂಥವರ ಹೆಸರಿನಲ್ಲಿ ಯಾರಾದರೂ ವೇಷ ಮರೆಸಿಕೊಂಡು ಅನಗತ್ಯವಾಗಿ ಓಡಾಡಿದರೆ ಬಂಧಿಸಲಾಗುವುದು’ ಎಂದು ಎಚ್ಚರಿಸಿದರು.

‘ಕಳೆದ ಬಾರಿ ಲಾಕ್‌ಡೌನ್‌ ವೇಳೆ ಆಹಾರ ಪೂರೈಕೆ ಮಾಡುವ ಕಂಪನಿಗಳ ಸಿಬ್ಬಂದಿ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಕಂಪನಿಗೆ ಸಂಬಂಧವೇ ಇಲ್ಲದವರು ಟಿ–ಶರ್ಟ್‌ ಹಾಕಿಕೊಂಡು ಓಡಾಡಿದ್ದರು. ಪೊಲೀಸರ ದಿಕ್ಕು ತಪ್ಪಿಸಿದ್ದಾರೆ. ಈ ಬಾರಿ ಆ ರೀತಿಯಾಗಲು ಬಿಡುವುದಿಲ್ಲ. ಯಾರಾದರೂ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಿದರೆ ಕಠಿಣ ಕ್ರಮ ನಿಶ್ಚಿತ’ ಎಂದೂ ಹೇಳಿದರು.

‘ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಪೊಲೀಸರು, ಬಿಬಿಎಂ‍ಪಿ ಹಾಗೂ ಆರೋಗ್ಯ ಇಲಾಖೆಯವರು ಶ್ರಮ ವಹಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಯಾರಾದರೂ ಚೇಷ್ಟೆ ಮಾಡಲು ರಸ್ತೆಗೆ ಬಂದರೆ ದಂಡ ವಿಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ವಾಹನಗಳನ್ನೂ ಜಪ್ತಿ ಮಾಡಲಾಗುವುದು’ ಎಂದೂ ಅವರು ಎಚ್ಚರಿಸಿದರು.

‘ಕೊರೊನಾ ಸೋಂಕು ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಶನಿವಾರ ಹಾಗೂ ಭಾನುವಾರ ಸಾರ್ವಜನಿಕರು ಮನೆಯಲ್ಲೇ ಇದ್ದು ಸಹಕಾರ ನೀಡಬೇಕು. ಸರ್ಕಾರ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಆದೇಶ ಹಾಗೂ ಸರ್ಕಾರ ನಿಯಮಗಳನ್ನು ಪಾಲಿಸುವ ಮೂಲಕ ನಾವೆಲ್ಲರೂ ಕೊರೊನಾ ವಿರುದ್ಧ ಹೋರಾಡೋಣ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.