ADVERTISEMENT

ಸರಗಳ್ಳತನಕ್ಕೆ ‘ಉತ್ತರ’ ಗ್ಯಾಂಗ್; ಇಬ್ಬರ ಕಾಲಿಗೆ ಗುಂಡೇಟು

ರಾಜಧಾನಿಯಲ್ಲಿ ಸರಗಳ್ಳತನಕ್ಕೆ ಹೊಸ ಗ್ಯಾಂಗ್‌ | ಉತ್ತರ ವಿಭಾಗ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 20:22 IST
Last Updated 31 ಆಗಸ್ಟ್ 2020, 20:22 IST
ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿಗಳು
ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿಗಳು   

ಬೆಂಗಳೂರು: ಮಹಿಳೆಯರನ್ನು ಹಿಂಬಾಲಿಸಿ ಸರಗಳವು ಮಾಡುತ್ತಿದ್ದ ಉತ್ತರ ಭಾರತದ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಉತ್ತರ ವಿಭಾಗದ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.

‘ಉತ್ತರ ಭಾರತದ ಸಂಜಯ್‌ಕುಮಾರ್ (30) ಹಾಗೂ ಸುಹಾಸ್ (30) ಬಂಧಿತರು. ಗುಂಡೇಟಿನಿಂದಾಗಿ ಅವರ ಕಾಲಿಗೆ ಗಾಯವಾಗಿದ್ದು, ಅವರನ್ನು ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಉತ್ತರ ಭಾರತದಿಂದ ಬಂದು ನಗರದಲ್ಲಿ ನೆಲೆಸಿದ್ದರು. ತಮ್ಮದೇ ಊರಿನ ಪರಿಚಯಸ್ಥರನ್ನು ಸೇರಿಸಿಕೊಂಡು ಗ್ಯಾಂಗ್‌ ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದರು. ಮತ್ತಷ್ಟು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋಮವಾರ ಬೆಳಿಗ್ಗೆ 5.45ರ ಸುಮಾರಿಗೆ ರಾಜಾಜಿನಗರ ಹಳೇ ಪೊಲೀಸ್ ಠಾಣೆ ಸಮೀಪದಲ್ಲಿ 61 ವರ್ಷದ ಮಹಿಳೆಯೊಬ್ಬರ ಸರ ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿತ್ತು. ಇನ್‌ಸ್ಪೆಕ್ಟರ್‌ ವೆಂಕಟೇಶ್, ಸಬ್ ಇನ್‌ಸ್ಪೆಕ್ಟರ್ ವಿನೋದ್ ನಾಯ್ಕ್ ಹಾಗೂ ಸಿಬ್ಬಂದಿ ಆರೋಪಿಗಳ ಪತ್ತೆಗೆ ಮುಂದಾಗಿದ್ದರು.’

ADVERTISEMENT

‘ಬೈಕ್ ಸುಳಿವು ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳು ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿರುವುದು ಗೊತ್ತಾಗಿತ್ತು. ಸ್ಥಳಕ್ಕೆ ಹೋಗಿದ್ದ ಪೊಲೀಸರು, ಆರೋಪಿಗಳನ್ನು ಬೆನ್ನಟ್ಟಿದ್ದರು. ಕಿರ್ಲೋಸ್ಕರ್ ಪೌಲ್ಟ್ರಿ ಫಾರಂ ಹತ್ತಿರ ಆರೋಪಿಗಳ ಪಲ್ಸರ್ ಬೈಕ್ ಉರುಳಿಬಿದ್ದಿತ್ತು. ತಮ್ಮನ್ನು ಹಿಡಿಯಲು ಹೋದ ಪಿಎಸ್‌ಐ ಜಗದೀಶ್ ಹಾಗೂ ಹೆಡ್ ಕಾನ್‌ಸ್ಟೆಬಲ್ ದಯಾಳ ಮೇಲೆಯೇ ಆರೋಪಿಗಳು ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು’ ಎಂದೂ ಡಿಸಿಪಿ ವಿವರಿಸಿದರು.

‘ಸಿಬ್ಬಂದಿ ರಕ್ಷಣೆಗೆ ಹೋದ ಇನ್‌ಸ್ಪೆಕ್ಟರ್ ವೆಂಕಟೇಶ್ ಹಾಗೂ ಪಿಎಸ್‌ಐ ವಿನೋದ್, ಆರೋಪಿಗಳಿಗೆ ಪಿಸ್ತೂಲ್ ತೋರಿಸಿ ಶರಣಾಗುವಂತೆ ಹೇಳಿದ್ದರು. ಅವರ ಮೇಲೆಯೇ ಹಲ್ಲೆ ಮಾಡಲು ಆರೋಪಿಗಳು ಮುಂದಾಗಿದ್ದರು. ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಹಾಗೂ ಪಿಎಸ್‌ಐ, ಇಬ್ಬರೂ ಆರೋಪಿಗಳ ಕಾಲಿಗೆ ಗುಂಡು ಹೊಡೆದು ಸೆರೆ ಹಿಡಿದರು. ಗಾಯಾಳು ಪೊಲೀಸರನ್ನು ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದೂ ಅವರು ತಿಳಿಸಿದರು.

‘ಆರೋಪಿಗಳ ಬಂಧನದಿಂದ ರಾಜಾಜಿನಗರ, ಕಾಮಾಕ್ಷಿಪಾಳ್ಯ, ಜ್ಞಾನಭಾರತಿ, ಸಂಜಯನಗರ, ಬಾಗಲಗುಂಟೆ, ನೆಲಮಂಗಲ ಹಾಗೂ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸರಗಳವು ಪ್ರಕರಣಗಳು ಪತ್ತೆಯಾಗಿವೆ’ ಎಂದೂ ಹೇಳಿದರು.

ಏಳು ಮಂದಿಯ ಹೊಸ ಗ್ಯಾಂಗ್

‘ಮಧ್ಯಪ್ರದೇಶ, ಪಂಜಾಬ್‌, ರಾಜಸ್ಥಾನದ ಏಳು ಮಂದಿ ಈ ಗ್ಯಾಂಗ್‌ನಲ್ಲಿದ್ದಾರೆ. ಅದರಲ್ಲಿ ಸಂಜಯ್‌ಕುಮಾರ್ ಹಾಗೂ ಸುಹಾಸ್‌ನನ್ನು ಮಾತ್ರ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಈ ಮೊದಲೇ ಸರಗಳವು ಕೃತ್ಯ ಎಸಗುತ್ತಿದ್ದ ಬವಾರಿಯಾ ಹಾಗೂ ಇರಾನಿ ಗ್ಯಾಂಗ್‌ಗೆ ಸರಿಸಾಟಿಯಾಗಿಯೇ ಆರೋಪಿಗಳು ಹೊಸ ಗ್ಯಾಂಗ್‌ ಕಟ್ಟಿಕೊಂಡಿದ್ದಾರೆ. ಕೆಲ ಆರೋಪಿಗಳು, ನಗರದಲ್ಲಿ 10 ವರ್ಷಗಳಿಂದ ನೆಲೆಸಿದ್ದಾರೆ. ಉಳಿದವರು ಆಗಾಗ ನಗರಕ್ಕೆ ಬಂದು ಕೃತ್ಯ ಎಸಗುತ್ತಿದ್ದರು’ ಎಂದೂ ವಿವರಿಸಿದರು.

‘ಬಾಡಿಗೆ ಮನೆಯಲ್ಲಿ ಇರುತ್ತಿದ್ದ ಆರೋಪಿಗಳು, ಬೈಕ್ ಕಳವು ಮಾಡಿ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು. ನಸುಕಿನಲ್ಲಿ ಹಾಗೂ ಸಂಜೆ ವೇಳೆ ವಾಯುವಿಹಾರಕ್ಕೆ ಬರುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.