ADVERTISEMENT

ಬೆಂಗಳೂರು: ಗೇಲಿ ಮಾಡಿದ್ದಕ್ಕೆ ಸ್ನೇಹಿತನ ಹತ್ಯೆ, ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2023, 15:11 IST
Last Updated 18 ನವೆಂಬರ್ 2023, 15:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಲಕ್ಷ್ಮಣ್ ಮಾಂಜಿ (22) ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಉತ್ತರ ಭಾರತದ ಜಗದೇವ್ ಹಾಗೂ ಚಂದನ್ ಕುಮಾರ್ ಬಂಧಿತರು. ಇಬ್ಬರು ಸೇರಿಕೊಂಡು ಲಕ್ಷ್ಮಣ್ ಅವರನ್ನು ಕೊಂದು ಪರಾರಿಯಾಗಿದ್ದರು. ದೂರು ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಲಕ್ಷ್ಮಣ್ ಹಾಗೂ ಆರೋಪಿಗಳು, ಉತ್ತರ ಭಾರತದವರು. ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಮೂವರೂ ಕೂಲಿ ಕೆಲಸ ಮಾಡುತ್ತಿದ್ದರು. ಒಂದೇ ಕಡೆ ವಾಸವಿದ್ದರು. ಆಗಾಗ ಮದ್ಯದ ಪಾರ್ಟಿ ಮಾಡುತ್ತಿದ್ದರು’ ಎಂದು ತಿಳಿಸಿದರು.

ಪಾರ್ಟಿ ವೇಳೆ ಗಲಾಟೆ: ‘ಲಕ್ಷ್ಮಣ್ ಹಾಗೂ ಆರೋಪಿಗಳು, ನ. 16ರಂದು ರಾತ್ರಿ ಮದ್ಯದ ಪಾರ್ಟಿ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಆರೋಪಿಗಳ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದ ಲಕ್ಷ್ಮಣ್ ಗೇಲಿ ಮಾಡಿದ್ದ. ಇದೇ ವಿಚಾರವಾಗಿ ಗಲಾಟೆ ಶುರುವಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಲಕ್ಷ್ಮಣ್ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ಅವರನ್ನು ಮನೆಯಿಂದ ಹೊರಗೆ ಎಳೆದು ತಂದಿದ್ದರು. ನಂತರ, ಕ್ಯಾಸಲಹಳ್ಳಿ ಬಳಿಯ ನಾರಾಯಣ ಪಿಯು ಕಾಲೇಜ್‌ನ ಹಿಂಭಾಗದಲ್ಲಿರುವ ಭೈರತಿ ಬಸವರಾಜ್‌ ಅವರಿಗೆ ಸೇರಿದ್ದ ಜಮೀನಿಗೆ ಹೊತ್ತೊಯ್ದಿದ್ದರು. ಅಲ್ಲಿಯೇ ತಲೆಗೆ ಇಟ್ಟಿಗೆಯಿಂದ ಹೊಡೆದು ಲಕ್ಷ್ಮಣ ಅವರನ್ನು ಕೊಂದಿದ್ದರು. ನಂತರ, ಪೊದೆಯಲ್ಲಿ ಮೃತದೇಹ ಎಸೆದು ಸ್ಥಳದಿಂದ ಪರಾರಿಯಾಗಿದ್ದರು’ ಎಂದು ತಿಳಿಸಿದರು.

‘ಮೃತದೇಹ ನೋಡಿದ್ದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಇದೊಂದು ಕೊಲೆ ಎಂಬುದು ಮೃತದೇಹದ ಮೇಲಿನ ಗಾಯದಿಂದ ಗೊತ್ತಾಗಿತ್ತು. ಸ್ನೇಹಿತರೇ ಕೊಲೆ ಮಾಡಿರುವ ಬಗ್ಗೆ ಸುಳಿವು ಸಹ ಸಿಕ್ಕಿತ್ತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.