ಬೆಂಗಳೂರು: ರಾಜ್ಯದ ಹೆಡ್ ಕಾನ್‌ಸ್ಟೆಬಲ್‌ಗಳು, ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಸ್ಲೋಚ್ ಹ್ಯಾಟ್ (ಟೋಪಿ) ಅನ್ನು ಬದಲಾವಣೆ ಮಾಡಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ.
ಈ ಸಂಬಂಧ ಏಪ್ರಿಲ್ 4ರಂದು ಸಭೆ ನಡೆಸಿ, ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್ಆರ್ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಪೊಲೀಸ್ ಕಿಟ್ ನಿರ್ದಿಷ್ಟತಾ ಸಮಿತಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಇಲಾಖೆಯ ಅಧಿಕಾರಿಗಳೂ ಪಾಲ್ಗೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.
ಹಳೆಯ ಮಾದರಿಯ ಟೋಪಿ ಬದಲಿಗೆ ಸ್ಮಾರ್ಟ್ ಪೀಕ್ ಕ್ಯಾಪ್ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಕಾನ್‌ಸ್ಟೆಬಲ್‌ಗಳು ಆರಂಭದಲ್ಲಿ ಟರ್ಬನ್ ಮಾದರಿಯ ಟೋಪಿ ಬಳಸುತ್ತಿದ್ದರು. ಪ್ರಸ್ತುತ ಬಳಸುತ್ತಿರುವ ಟೋಪಿಯನ್ನು ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆರಂಭಿಸಲಾಗಿತ್ತು. ಹಳೆ ಮಾದರಿಯ ಟೋಪಿ ಬಳಕೆಯಿಂದ ಕಾನ್‌ಸ್ಟೆಬಲ್‌ಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಪ್ರತಿಭಟನೆ, ರ್‍ಯಾಲಿ ವೇಳೆ ಈ ಟೋಪಿ ಧರಿಸಿ, ಕರ್ತವ್ಯ ನಿರ್ವಹಣೆ ಕಷ್ಟ. ಟೋಪಿ ಕೆಳಕ್ಕೆ ಬಿದ್ದರೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಆದ್ದರಿಂದ, ಹಳೆ ಮಾದರಿಯ ಟೋಪಿ ಬದಲಿಗೆ ಗಟ್ಟಿಯಾಗಿ ನಿಲ್ಲುವಂತಹ ಟೋಪಿ ನೀಡಿದರೆ ಉತ್ತಮ ಎಂದು ಕಾನ್‌ಸ್ಟೆಬಲ್‌ಗಳು ಕೋರಿದ್ದರು.
‘ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳ ಕಾನ್‌ಸ್ಟೆಬಲ್‌ಗಳು ಪೀಕ್ ಕ್ಯಾಪ್‌ಗಳನ್ನು ಬಳಸುತ್ತಿದ್ದಾರೆ. ರಾಜ್ಯದಲ್ಲೂ ಅದೇ ಮಾದರಿ ಟೋಪಿಯನ್ನು ವಿತರಿಸುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.