ADVERTISEMENT

ಗಣೇಶೋತ್ಸವ: ಪೊಲೀಸ್‌ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 20:30 IST
Last Updated 29 ಆಗಸ್ಟ್ 2022, 20:30 IST
ಜೆಜೆ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಪೊಲೀಸರು ಪಥಸಂಚಲನ ನಡೆಸಿದರು
ಜೆಜೆ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಪೊಲೀಸರು ಪಥಸಂಚಲನ ನಡೆಸಿದರು   

ಬೆಂಗಳೂರು: ಗಣೇಶೋತ್ಸವದ ವೇಳೆ ಶಾಂತಿ ಹಾಗೂ ಸೌಹಾರ್ದ ಕಾಪಾಡಲು ಪಶ್ಚಿಮ ವಿಭಾಗದ ಜೆ.ಜೆ. ನಗರ ವ್ಯಾಪ್ತಿಯಲ್ಲಿ ಪೊಲೀಸರು ಸೋಮವಾರ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.

ಕೋದಂಡರಾಮ ದೇವಸ್ಥಾನ ಹಾಗೂ ಪಾದರಾಯನಪುರ ಭಾಗದ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದರು. ಡಿಸಿಪಿ ಲಕ್ಷ್ಮಣ್‌ ನಿಂಬರಗಿ ಅವರ ನೇತೃತ್ವದಲ್ಲಿ ಸಿವಿಲ್‌ ಹಾಗೂ ಕೆಎಸ್‌ಆರ್‌ಪಿಯ 300ಕ್ಕೂ ಹೆಚ್ಚು ಸಿಬ್ಬಂದಿ ಪಥಸಂಚಲನ ನಡೆಸಿದರು.

ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೋರಿ ಕೆಲವು ಸಂಘಟನೆಗಳು ಮನವಿ ಸಲ್ಲಿಸಿದ್ದು, ಪರಿಸ್ಥಿತಿ ಸೂಕ್ಷ್ಮವಾಗಿರುವ ಕಾರಣಕ್ಕೆ ಈ ಭಾಗದಲ್ಲಿ ಪೊಲೀಸರು ನಿಗಾ ವಹಿಸಿದ್ದಾರೆ. ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ADVERTISEMENT

‘ಸ್ಥಳೀಯರಲ್ಲಿ ಧೈರ್ಯ ತುಂಬಲು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಪಥಸಂಚಲನ ಮಾಡಲಾಗಿದೆ. ಮಂಗಳವಾರ ಬೆಳಿಗ್ಗೆ 10.30ಕ್ಕೆ ಚಾಮರಾಜಪೇಟೆ ಭಾಗದಲ್ಲಿ ಪಥಸಂಚಲನ ನಡೆಸಲಾಗುವುದು’ ಎಂದು ಲಕ್ಷ್ಮಣ ನಿಂಬರಗಿ ತಿಳಿಸಿದರು.

*
ಅರೆಸೇನಾ ಹಾಗೂ ವಿಶೇಷ ಪಡೆಗಳೊಂದಿಗೆ ಪಥಸಂಚಲನ ನಡೆಸಿ ಪೊಲೀಸರ ಪ್ರಾಬಲ್ಯ ಪ್ರದರ್ಶಿಸಿ, ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸಲಾಗಿದೆ.
– ಲಕ್ಷ್ಮಣ ನಿಂಬರಗಿ, ಡಿಸಿಪಿ, ಪಶ್ಚಿಮ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.