ADVERTISEMENT

ಸಿ.ಎಂ ಮನೆ ಮುಂದೆ ಪ್ರತಿಭಟನೆಗೆ ಪೊಲೀಸರ ತಡೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 17:15 IST
Last Updated 15 ಜೂನ್ 2021, 17:15 IST
ಮುಖ್ಯಮಂತ್ರಿಯವರ ಮನೆಗೆ ಮಂಗಳವಾರ ಕಾಲ್ನಡಿಗೆಯಲ್ಲಿ ತೆರಳಲು ಯತ್ನಿಸಿದ ಜನಾಗ್ರಹ ಆಂದೋಲನದ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ಯುತ್ತಿರುವುದು– ಪ್ರಜಾವಾಣಿ ಚಿತ್ರ
ಮುಖ್ಯಮಂತ್ರಿಯವರ ಮನೆಗೆ ಮಂಗಳವಾರ ಕಾಲ್ನಡಿಗೆಯಲ್ಲಿ ತೆರಳಲು ಯತ್ನಿಸಿದ ಜನಾಗ್ರಹ ಆಂದೋಲನದ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ಯುತ್ತಿರುವುದು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳುವಂತೆ ಹಾಗೂ ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿರುವ ಎಲ್ಲರಿಗೂ ಪರಿಹಾರ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಯವರ ಮನೆ ಎದುರು ಮಂಗಳವಾರ ಪ್ರತಿಭಟನೆ ನಡೆಸಲು ಯತ್ನಿಸಿದ ಎಡಪಕ್ಷಗಳ ಮುಖಂಡರು ಮತ್ತು ಜನಾಗ್ರಹ ಆಂದೋಲನದ ಸದಸ್ಯರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

ಎಲ್ಲರಿಗೂ ಉಚಿತವಾಗಿ ಕೋವಿಡ್‌ ಲಸಿಕೆ, ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲ ಕುಟುಂಬಗಳಿಗೆ ತಿಂಗಳಿಗೆ ತಲಾ 10 ಕೆ.ಜಿ ಆಹಾರ ಧಾನ್ಯ ಮತ್ತು ₹ 10,000 ಪರಿಹಾರ ನೀಡುವಂತೆ ಆಗ್ರಹಿಸಿ ಸಿಪಿಎಂ, ಸಿಪಿಐ, ಎಸ್‌ಯುಸಿಐ, ಸಿಪಿಎಂಎಲ್‌, ಆಲ್‌ ಇಂಡಿಯಾ ಫಾರ್ವರ್ಡ್‌ ಬ್ಲಾಕ್‌, ರಿಪಬ್ಲಿಕನ್‌ ಪಾರ್ಟಿ ಆಫ್ ಇಂಡಿಯಾ ಮತ್ತು ಸ್ವರಾಜ್‌ ಇಂಡಿಯಾ ಮುಖಂಡರು ಮುಖ್ಯಮಂತ್ರಿಯವರ ನಿವಾಸದ ಎದುರು ಪ್ರತಿಭಟನೆ ನಡೆಸಲು ಯತ್ನಿಸಿದರು.

ಗಾಂಧಿ ಭವನದಿಂದ ಮೆರವಣಿಗೆಯಲ್ಲಿ ಹೊರಡಲು ಸಿದ್ಧರಾಗುತ್ತಿದ್ದ ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ, ಮುಖಂಡ ಡಾ.ಕೆ. ಪ್ರಕಾಶ್‌, ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್, ಮುಖಂಡ ಎಚ್‌.ವಿ. ಅನಂತ ಸುಬ್ಬರಾವ್‌, ಸಿಪಿಎಂಎಲ್‌ ರಾಜ್ಯ ಸಮಿತಿ ಕಾರ್ಯದರ್ಶಿ ಕ್ಲಿಫ್ಟನ್‌ ಡಿ. ರೊಜಾರಿಯೊ, ಎಸ್‌ಯುಸಿಐ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಉಮಾ, ಫಾರ್ವರ್ಡ್‌ ಬ್ಲಾಕ್‌ ರಾಜ್ಯ ಸಮಿತಿ ಕಾರ್ಯದರ್ಶಿ ಜಿ. ಶಿವಶಂಕರ್‌, ಸ್ವರಾಜ್‌ ಇಂಡಿಯಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ, ಮುಖಂಡ ಬಡಗಲಪುರ ನಾಗೇಂದ್ರ ಮತ್ತು ಆರ್‌ಪಿಐ ರಾಜ್ಯ ಘಟಕದ ಅಧ್ಯಕ್ಷ ಮೋಹನ್‌ ರಾಜ್‌ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಕೆಲ ಸಮಯದ ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು.

ADVERTISEMENT

ಅರ್ಧದಲ್ಲೇ ತಡೆ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಸಮಗ್ರ ಪ್ಯಾಕೇಜ್‌ ನೀಡುವಂತೆ ಒತ್ತಾಯಿಸಿ ಜನಾಗ್ರಹ ಆಂದೋಲನದ ಸದಸ್ಯರು ಮುಖ್ಯಮಂತ್ರಿಯವರ ಮನೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯದಲ್ಲೇ ಅವರನ್ನು ಬಂಧಿಸಿ ಕರೆದೊಯ್ಯಲಾಯಿತು.

ಜನಾಗ್ರಹ ಆಂದೋಲನದ ಮುಖಂಡರಾದ ಮಾವಳ್ಳಿ ಶಂಕರ್‌, ಕೋಡಿಹಳ್ಳಿ ಚಂದ್ರಶೇಖರ್, ಎಸ್‌. ಬಾಲನ್‌, ವಿ, ನಾಗರಾಜ್‌, ಹಬೀಬುಲ್ಲಾ, ಕುಮಾರ್‌ ಸಮತಳ ಸೇರಿದಂತೆ 40ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದು, ಸ್ವಲ್ಪ ಸಮಯದ ಬಳಿಕ ಬಿಡುಗಡೆ ಮಾಡಿದರು. ನಂತರ ಎಲ್ಲರೂ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.