ADVERTISEMENT

ಯಲಹಂಕ: ‘ದಾಳಿಂಬೆ ಫಾರ್ಮ್‌ ಟೂರಿಸಂ’ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 23:50 IST
Last Updated 13 ಸೆಪ್ಟೆಂಬರ್ 2025, 23:50 IST
ಪ್ರೊ.ಅಶೋಕ್‌ ಸಂಗಪ್ಪ ಆಳೂರ್‌ ಅವರು ಎನ್‌ಸಿಆರ್‌ ಫಾರ್ಮ್‌ನಲ್ಲಿ ದಾಳಿಂಬೆ ಹಣ್ಣುಗಳನ್ನು ವೀಕ್ಷಿಸಿದರು. ಚಂದ್ರ ಎನ್‌ ಆರ್‌, ಡಾ.ಸುನಿಲ್‌ ಡಿ ತಮಗಲೆ ಉಪಸ್ಥಿತರಿದ್ದರು
ಪ್ರೊ.ಅಶೋಕ್‌ ಸಂಗಪ್ಪ ಆಳೂರ್‌ ಅವರು ಎನ್‌ಸಿಆರ್‌ ಫಾರ್ಮ್‌ನಲ್ಲಿ ದಾಳಿಂಬೆ ಹಣ್ಣುಗಳನ್ನು ವೀಕ್ಷಿಸಿದರು. ಚಂದ್ರ ಎನ್‌ ಆರ್‌, ಡಾ.ಸುನಿಲ್‌ ಡಿ ತಮಗಲೆ ಉಪಸ್ಥಿತರಿದ್ದರು   

‌ಯಲಹಂಕ: ತಾಲ್ಲೂಕಿನ ನಾಗದಾಸನಹಳ್ಳಿಯ ಎನ್‌ಸಿಆರ್‌ ಫಾರ್ಮ್‌ನಲ್ಲಿ ಪೋಮೆಕ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ‘ದಾಳಿಂಬೆ ಫಾರ್ಮ್‌ ಟೂರಿಸಂ’ ಕಾರ್ಯಕ್ರಮ ಆಯೋಜಿಸಲಾಗಿತ್ತು.

‘ತೋಟದಲ್ಲಿ ನಡೆದಾಡುತ್ತ, ಗಿಡದಿಂದ ನೀವೇ ಹಣ್ಣು ಕಿತ್ತು, ಮನೆಗೆ ತೆಗೆದುಕೊಂಡು ಹೋಗಿʼ ಎಂಬ ಪರಿಕಲ್ಪನೆಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ್‌ ಸಂಗಪ್ಪ ಆಳೂರ್‌, ‘ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ರೈತರು ನೇರವಾಗಿ ಗ್ರಾಹಕರನ್ನು ಸಂಪರ್ಕಿಸುವ ಒಳ್ಳೆಯ ಪ್ರಯತ್ನವಾಗಿದೆ. ಇದರಿಂದ ರೈತರಿಗೆ ನ್ಯಾಯಸಮ್ಮತ ಬೆಲೆ ದೊರಕಿಸಲು ಸಹಾಯ ಮಾಡುವುದರ ಜೊತೆಗೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಣ್ಣುಗಳು ಕಡಿಮೆ ದರದಲ್ಲಿ ದೊರೆಯಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಕಾರ್ಯ’ ಎಂದರು.

ADVERTISEMENT

ರೈತ ಚಂದ್ರ ಅವರು, ಪ್ರತಿ ಕೆ.ಜಿ ದಾಳಿಂಬೆಯನ್ನು ಇಲ್ಲಿ ₹200ಕ್ಕೆ ಮಾರಾಟ ಮಾಡುತ್ತಿದ್ದರೆ, ಇದೇ ಹಣ್ಣು ಮಾರುಕಟ್ಟೆಯಲ್ಲಿ ₹400ಕ್ಕೆ ಮಾರಾಟವಾಗುತ್ತಿದೆ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವುದರಿಂದ ರೈತರಿಗೆ ಹೆಚ್ಚುವರಿ ಲಾಭ ಹಾಗೂ ಗ್ರಾಹಕರಿಗೆ ಉಳಿತಾಯವಾಗುವ ಮೂಲಕ ಇಬ್ಬರಿಗೂ ಲಾಭದಾಯಕವಾಗುತ್ತದೆ ಎಂದರು.

ಉದ್ಘಾಟನಾ ಸಮಾರಂಭದ ಹೊತ್ತಿಗೆ ಒಂದು ಸಾವಿರ ಕೆ.ಜಿಯಷ್ಟು ಹಣ್ಣು ಮಾರಾಟವಾಗಿದ್ದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು.

ದಾಳಿಂಬೆ ಬೆಳೆ ಸಲಹೆಗಾರ ಡಾ.ಸುನಿಲ್‌.ಡಿ ತಮಗಲೆ ಮತ್ತು ಕೃಷಿ ಪದವೀಧರ ಡಾ.ಅಂಬರೀಶ್‌.ಬಿ.ಎನ್‌ ಹಾಗೂ ಪೋಮೆಕ್ಸ್‌ ಇಂಟರ್‌ನ್ಯಾಷನಲ್‌ ನಿರ್ವಾಹಕರು  ಈ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ. ಎನ್‌ಸಿಆರ್‌ ಫಾರ್ಮ್‌ನಲ್ಲಿ ಜಿಯೋ-ಟ್ಯಾಗ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ರೈತ ಚಂದ್ರ.ಎನ್‌ ಆರ್‌ ಮಾತನಾಡಿ, ‘ಪ್ರತಿ ಮರದಿಂದ ಸರಾಸರಿ 30 ಕೆಜಿ ಹಣ್ಣು ದೊರೆಯುವ ನಿರೀಕ್ಷೆಯಿದ್ದು, ಪ್ರತಿ ಹಣ್ಣು 200ರಿಂದ 500ಗ್ರಾಂ ತೂಕ ಬರುತ್ತಿದೆ. ಗ್ರಾಹಕರು  ದಾಳಿಂಬೆ ಕೃಷಿಯ ಬಗ್ಗೆಯೂ ಮಾಹಿತಿ ಪಡೆದರು. ಈ ಕಾರ್ಯಕ್ರಮದ ಮೂಲಕ ರೈತರಿಂದ ಉತ್ತಮ ಸ್ಪಂದನೆ ದೊರೆತಿದೆ’ ಎಂದರು.

ರೈತರಾದ ಅರವಿಂದ್, ಗಿರೀಶ್‌, ನಂಜುಂಡಗೌಡ, ಡಾ.ದೇವರಾಜ್‌, ಮಹೇಶ್‌, ಮುನೇಗೌಡ, ಆನಂದ್‌, ಮಂಜುನಾಥ್‌, ರಾಜೇಂದ್ರ, ಹರೀಶ್‌ ಬಯ್ಯಣ್ಣ ಉಪಸ್ಥಿತರಿದ್ದರು.

70 ವರ್ಷದ ಡಾ.ಜಗದೀಶ್‌ ಅವರು 50 ಕೆಜಿ ಹಣ್ಣು ಖರೀದಿಸಿ, ರೈತರನ್ನು ನೇರವಾಗಿ ಗ್ರಾಹಕರಿಗೆ ಸಂಪರ್ಕಿಸುವ ಪ್ರಯತ್ನವನ್ನು ಶ್ಲಾಘಿಸಿದರು. ಭಾನುವಾರ ಸಹ ಈ ಕಾರ್ಯಕ್ರಮ ಮುಂದುವರಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.