ಬೆಂಗಳೂರು: ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರವು (ಬಿಐಸಿ) ಇದೇ ಶನಿವಾರ (ಆ.23) ಬೆಳಿಗ್ಗೆ 11 ಗಂಟೆಗೆ ಪೂಜಾ ಕುಣಿತ ಪ್ರದರ್ಶನ ಹಮ್ಮಿಕೊಂಡಿದೆ.
ಮಂಡ್ಯದ ಶ್ರೀ ವಿನಾಯಕ ಯುವಕರ ಕಲಾ ಬಳಗ ಈ ಜಾನಪದ ನೃತ್ಯ ಪ್ರದರ್ಶಿಸಲಿದೆ. ಇದು ‘ಬಿಐಸಿ ಜಾನಪದ’ ಸರಣಿಯ ನಾಲ್ಕನೆ ಕಾರ್ಯಕ್ರಮವಾಗಿದ್ದು, ‘ತ್ವರಿತ ಆರ್ಟ್ಸ್ ಕಲೆಕ್ಟಿವ್ ಇಂಡಿಯಾ’ದ ಸಹಯೋಗವಿದೆ. ಜಾನಪದ ಕಲಾವಿದ ಕೆ.ಬಿ. ಸ್ವಾಮಿ ನೇತೃತ್ವದಲ್ಲಿ ಕಲಾವಿದರ ತಂಡವು ಪೂಜಾ ಕುಣಿತವನ್ನು ಪ್ರಸ್ತುತಪಡಿಸಲಿದೆ.
ಈ ಜಾನಪದ ಕಲಾ ಪ್ರಕಾರವು ಭಕ್ತಿ ಮತ್ತು ಧಾರ್ಮಿಕ ಆಚರಣೆಗಳ ಸಂಗಮವಾಗಿದೆ. ಈ ನೃತ್ಯದಲ್ಲಿ ಭಕ್ತಿಯ ಜತೆಗೆ ಉತ್ಸಾಹವನ್ನೂ ಕಾಣಬಹುದು. ಪ್ರದರ್ಶಕರು ತಲೆಯ ಮೇಲೆ ದೇವರ ವಿಗ್ರಹಗಳನ್ನು ಹೊತ್ತು, ತಮಟೆ, ನಗಾರಿ, ಹರೆಗಳ ನಾದಕ್ಕೆ ತಕ್ಕಂತೆ ಕುಣಿಯುತ್ತಾರೆ.
60 ನಿಮಿಷಗಳ ಈ ಪ್ರದರ್ಶನವು ಪ್ರೇಕ್ಷಕರಿಗೆ ವಿಶಿಷ್ಟ ಅನುಭವ ಒದಗಿಸಲಿದೆ. ಪ್ರವೇಶ ಉಚಿತ ಇರಲಿದ್ದು, ಮೊದಲು ಬಂದವರಿಗೆ ಆಸನಗಳು ಲಭ್ಯ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.