ADVERTISEMENT

ರಸ್ತೆ ಗುಂಡಿ: ಇಂದಿನಿಂದ ದುರಸ್ತಿ ಕಾರ್ಯ

ಐದಾರು ವರ್ಷ ಒಂದೇ ಸ್ಥಳದಲ್ಲಿರುವ ಸಿಬ್ಬಂದಿ ವರ್ಗಾವಣೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 20:55 IST
Last Updated 21 ಅಕ್ಟೋಬರ್ 2022, 20:55 IST
ಯಲಹಂಕ ವಲಯ ವ್ಯಾಪ್ತಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಶುಕ್ರವಾರ ಪರಿಶೀಲಿಸಿದರು. ಶಾಸಕ ವಿಶ್ವನಾಥ್, ವಲಯ ಆಯುಕ್ತ ರಂಗಪ್ಪ, ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್, ವಲಯ ಮುಖ್ಯ ಎಂಜಿನಿಯರ್ ರಂಗನಾಥ್ ಉಪಸ್ಥಿತರಿದ್ದರು
ಯಲಹಂಕ ವಲಯ ವ್ಯಾಪ್ತಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಶುಕ್ರವಾರ ಪರಿಶೀಲಿಸಿದರು. ಶಾಸಕ ವಿಶ್ವನಾಥ್, ವಲಯ ಆಯುಕ್ತ ರಂಗಪ್ಪ, ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್, ವಲಯ ಮುಖ್ಯ ಎಂಜಿನಿಯರ್ ರಂಗನಾಥ್ ಉಪಸ್ಥಿತರಿದ್ದರು   

ಬೆಂಗಳೂರು: ‘ನಗರದಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಶನಿವಾರದಿಂದ ಆರಂಭಿಸಲಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಸತತ ಮಳೆಯಿಂದ ರಸ್ತೆಗಳ ದುರಸ್ತಿಗೆ ಹಿನ್ನಡೆಯಾಗಿತ್ತು. ಗುರುವಾರದಿಂದ ಮಳೆ ಬಿಡುವು ನೀಡಿದೆ. ಶನಿವಾರದಿಂದ 10 ದಿನ ಮಳೆ ಇರುವುದಿಲ್ಲ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ. ಹೀಗಾಗಿ, ಈ ಅವಧಿಯಲ್ಲಿ ಎಲ್ಲ ರಸ್ತೆಗಳ ಗುಂಡಿ ಹಾಗೂ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಯಲಹಂಕದಲ್ಲಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದರು.

ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಅವರು, ‘ಡಾಂಬರು ಉತ್ಪಾದನಾ ಘಟಕವನ್ನು ಅಣಿಗೊಳಿಸಿಕೊಳ್ಳಬೇಕು. ಶನಿವಾರದಿಂದಲೇ ದುರಸ್ತಿ ಕೆಲಸ ಹಗಲು–ರಾತ್ರಿ ನಡೆಯಬೇಕು ಎಂದುಎಲ್ಲ ವಲಯ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ’ ಎಂದು ವಿವರಿಸಿದರು.

ADVERTISEMENT

ಯಲಹಂಕ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರು, ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಬೆಳಿಗ್ಗೆ 6ರಿಂದ ಎನ್.ಇ.ಎಸ್ ಬಸ್ ನಿಲ್ದಾಣದಿಂದ 16ನೇ ಎ ಕ್ರಾಸ್ ಸರ್ವೀಸ್ ರಸ್ತೆ, ಶೇಷಾದ್ರಿಪುರಂ ಕಾಲೇಜು ರಸ್ತೆ, ಶರಾವತಿ ಹೋಟೆಲ್ ರಸ್ತೆ, ಯಲಹಂಕ ನ್ಯೂ ಟೌನ್ ಬಸ್ ನಿಲ್ದಾಣ, ಸಂದೀಪ್ ಉನ್ನಿಕೃಷ್ಣನ್ ಮುಖ್ಯರಸ್ತೆ ಹಾಗೂ ಅಟ್ಟೂರುವರೆಗೆ ಸುಮಾರು 4 ಕಿ.ಮೀ. ನಡೆದು ಪರಿಶೀಲನೆ ನಡೆಸಿದರು.

‘ಮರದ ಕೊಂಬೆಗಳ ರಾಶಿಯನ್ನು ತೆರವುಗೊಳಿಸಿ, ಪಾದಚಾರಿ ಮಾರ್ಗದಲ್ಲಿರುವ ಶೆಡ್ ತೆರವು ಮಾಡಿ’ ಎಂದರು. ‘ಶೋಲ್ಡರ್ ಡ್ರೈನ್‌ಗಳ ದುರಸ್ತಿ, ಒ.ಎಫ್.ಸಿ ಕೇಬಲ್ ಗಳನ್ನು ತೆರವುಗೊಳಿಸಿ, ರಸ್ತೆ ಚರಂಡಿ ದುರಸ್ತಿ ಮಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ಬೇರೆಡೆ ಸ್ಥಳಾವಕಾಶ ಕಲ್ಪಿಸಿ, ರಸ್ತೆ ಬದಿ ಚರಂಡಿಯಲ್ಲಿ ಆಗಿಂದಾಗ್ಗೆ ಹೂಳು ತೆಗೆಯಿರಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.