ADVERTISEMENT

ಐಟಿಐ ಆಸ್ಪತ್ರೆಯನ್ನು ಕೋವಿಡ್‌ ಕೇಂದ್ರವಾಗಿ ಮಾರ್ಪಡಿಸಲು ಕ್ರಮ

‘ಪ್ರಜಾವಾಣಿ’ ವರದಿ ಪರಿಣಾಮ

​ಪ್ರಜಾವಾಣಿ ವಾರ್ತೆ
Published 10 ಮೇ 2021, 19:30 IST
Last Updated 10 ಮೇ 2021, 19:30 IST
ಕೆ.ಆರ್. ಪುರದ ಐಟಿಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬೈರತಿ ಬಸವರಾಜ. ಅಲಗೇಸನ್ ಮುರುಗನ್, ಕೋವಿಡ್ ಸಂಯೋಜಕಿ ಮಂಜುಳಾ, ಡಿಎಚ್ಒ ಶ್ರೀನಿವಾಸ್, ಮಹದೇವಪುರ ವಲಯ ಜಂಟಿ ಆಯುಕ್ತ ವೆಂಕಟಾಚಲಪತಿ, ಡಿಎಚ್ಒ ಚಂದ್ರಶೇಖರ್ ಇದ್ದರು.
ಕೆ.ಆರ್. ಪುರದ ಐಟಿಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬೈರತಿ ಬಸವರಾಜ. ಅಲಗೇಸನ್ ಮುರುಗನ್, ಕೋವಿಡ್ ಸಂಯೋಜಕಿ ಮಂಜುಳಾ, ಡಿಎಚ್ಒ ಶ್ರೀನಿವಾಸ್, ಮಹದೇವಪುರ ವಲಯ ಜಂಟಿ ಆಯುಕ್ತ ವೆಂಕಟಾಚಲಪತಿ, ಡಿಎಚ್ಒ ಚಂದ್ರಶೇಖರ್ ಇದ್ದರು.   

ಕೆ.ಆರ್.ಪುರ: ‘ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಐಟಿಐ ಆಸ್ಪತ್ರೆಯನ್ನು 100 ಹಾಸಿಗೆಯುಳ್ಳ ಕೋವಿಡ್ ಆರೈಕೆ ಕೇಂದ್ರವಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಹಾಗೂ ಬಿಬಿಎಂಪಿ ಮಹದೇವಪುರ ವಲಯದ ಕೊರೊನಾ ನಿಯಂತ್ರಣ ಉಸ್ತುವಾರಿ ಬೈರತಿ ಬಸವರಾಜ ಹೇಳಿದರು.

ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವ ಈ ಐಟಿಐ ಆಸ್ಪತ್ರೆಗೆ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

‘ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ತಂಡವನ್ನು ರಚನೆ ಮಾಡಿ ಈ ಆಸ್ಪತ್ರೆಯಲ್ಲಿ ಹೆಚ್ಚಿನ ಹಾಸಿಗೆ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ. ಈ ಸಂಬಂಧ ಕೇಂದ್ರ ಸಚಿವ ಸದಾನಂದಗೌಡ ಅವರ ಜೊತೆ ಮಾತನಾಡಿದ್ದೇನೆ. ಸಕಾರಾತ್ಮಕರಾಗಿ ಸ್ಪಂದಿಸಿದ್ದು ಕೋವಿಡ್ ಕೇಂದ್ರವಾಗಿ ಬಳಕೆ ಮಾಡಿಕೊಳ್ಳಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

‘150 ಹಾಸಿಗೆ ಹೊಂದಿರುವ ಈ ಆಸ್ಪತ್ರೆಯಲ್ಲಿ 100 ಆಮ್ಲಜನಕ ಹೊಂದಿರುವ ಹಾಸಿಗೆ ಹಾಗೂ 50 ಸಾಮಾನ್ಯ ಹಾಸಿಗೆಗಳಾಗಿ ಬಳಕೆ ಮಾಡಬಹುದಾಗಿದೆ’ ಎಂದರು.

ಐಟಿಐ ನಿರ್ದೇಶಕ ಅಲಗೇಸನ್ ಮುರುಗನ್, ‘ಈಗ ಕೋವಿಡ್ ಎಲ್ಲೆಡೆಗೂ ವ್ಯಾಪಿಸುತ್ತಿರುವುದರಿಂದ ರಾಜ್ಯ ಸರ್ಕಾರದೊಂದಿಗೆ ಸಮನ್ವಯತೆ ಸಾಧಿಸಿ ಕೋವಿಡ್ ಕೇಂದ್ರ ಮಾಡಲು ಐಟಿಐ ಮಂಡಳಿ ಸಹಕಾರ ನೀಡಲಿದೆ. ಈ ಬಗ್ಗೆ ಕೇಂದ್ರ ಸಚಿವ ಸದಾನಂದಗೌಡ ಹಾಗೂ ಸಚಿವ ಬೈರತಿ ಬಸವರಾಜ ಅವರೊಂದಿಗೆ ಮಾತನಾಡಿದ್ದೇವೆ’ ಎಂದು ಹೇಳಿದರು

ಈ ಆಸ್ಪತ್ರೆಯನ್ನು ಕೋವಿಡ್ ಆರೈಕೆ ಕೇಂದ್ರವಾಗಿಸಬೇಕು ಎಂದು ಕೆ.ಆರ್.ಪುರ ನಾಗರಿಕರು ಒತ್ತಾಯಿಸಿದ್ದರ ಬಗ್ಗೆ ಮೇ 9ರಂದು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿದ್ದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.