ADVERTISEMENT

ಸಾಮೂಹಿಕ ನಕಲು ಪ್ರಕರಣ: ಕರ್ತವ್ಯದಿಂದ ಪರೀಕ್ಷಾ ಕೇಂದ್ರ ಮುಖ್ಯ ಅಧೀಕ್ಷಕರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 20:00 IST
Last Updated 16 ಜೂನ್ 2022, 20:00 IST
   

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಲಾ ಕಾಲೇಜಿನಲ್ಲಿ ಬುಧವಾರ ನಡೆದಿದ್ದ ಸ್ನಾತಕೋತ್ತರ ಪರೀಕ್ಷೆಯಲ್ಲಿ ನಡೆದಿದ್ದ ಸಾಮೂಹಿಕ ನಕಲು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉನ್ನತ ಶಿಕ್ಷಣ ಸಚಿವರು, ಪರಿಶೀಲಿಸಿ ವರದಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಸಚಿವರ ಪರವಾಗಿ ಆಪ್ತ ಕಾರ್ಯದರ್ಶಿ ಬಿ.ವಿ.ಮಾರುತಿ ಪ್ರಸನ್ನ ಪತ್ರ ಬರೆದಿದ್ದಾರೆ.

‘ಪ್ರಜಾವಾಣಿ’ಯ ಗುರುವಾರದ ಸಂಚಿಕೆಯಲ್ಲಿ ‘ಸ್ನಾತಕೋತ್ತರ ಪರೀಕ್ಷೆ: ಸಾಮೂಹಿಕ ನಕಲು’ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟವಾಗಿತ್ತು.

ಕುಲಪತಿ ಪ್ರೊ.ಲಿಂಗರಾಜು ಗಾಂಧಿ ಅವರು, ಪ್ರಕರಣ ಸಂಬಂಧ ಕುಲಸಚಿವರಿಂದ (ಮೌಲ್ಯಮಾಪನ) ವರದಿ ತರಿಸಿಕೊಂಡಿದ್ದಾರೆ.

ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ನಕಲು ನಡೆದಿಲ್ಲವೆಂದು ಪ್ರಾಂಶುಪಾಲರು ಹಾಗೂ ಸಿಬ್ಬಂದಿ ತಿಳಿಸಿದ್ದಾರೆ. ಆದರೆ, ಪ್ರಾಂಶುಪಾಲರು ಪರೀಕ್ಷೆಯ ವೇಳೆ ಇರಲಿಲ್ಲ ಎಂಬುದು ದೃಢಪಟ್ಟಿದೆ. ಪರೀಕ್ಷಾ ನಿಯಮಾವಳಿ ಪ್ರಕಾರ ಕರ್ತವ್ಯ ಲೋಪವಾಗಿದ್ದು, ಅವರನ್ನು ಮುಖ್ಯ ಅಧೀಕ್ಷಕ ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ಕುಲಸಚಿವರು ವರದಿಯಲ್ಲಿ ತಿಳಿಸಿದ್ದಾರೆ. ಜಾಗೃತದಳದ ಸಿಬ್ಬಂದಿಯಿಂದಲೂ ಮೌಖಿಕ ವರದಿ ಪಡೆದುಕೊಳ್ಳಲಾಗಿದೆ ಎಂದು ಲಿಂಗರಾಜು ಗಾಂಧಿ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಜೂನ್‌ 13ರಂದು ಸ್ನಾತಕೋತ್ತರ ಪರೀಕ್ಷೆಗಳು ಆರಂಭಗೊಂಡಿದ್ದವು. ಮೊದಲ ದಿನ ತಾಂತ್ರಿಕ ಕಾರಣಕ್ಕೆ ಪರೀಕ್ಷೆ ಆರಂಭವಾಗಿದ್ದು ತಡವಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿತ್ತು ಎಂದು ವರದಿಯಲ್ಲಿ ಕುಲಸಚಿವರು ತಿಳಿಸಿದ್ದಾರೆ.

ಕಲಾ, ವಿಜ್ಞಾನ, ವಾಣಿಜ್ಯ ವಿಭಾಗಗಳ ಪರೀಕ್ಷಾ ಕೇಂದ್ರಕ್ಕೆ ಮುಖ್ಯ ಅಧೀಕ್ಷಕರಾಗಿದ್ದ ಕಲಾ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ ನಾಯ್ಕ್‌ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಅದೇ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ಪಿ.ಶಿವಪ್ರಸಾದ್‌ ಅವರನ್ನು ನೇಮಿಸಲಾಗಿದೆ. ಕಾಲೇಜಿನಲ್ಲಿ ಸಿಟಿಂಗ್ ಸ್ಕ್ವಾಡ್‌ ನಿಯೋಜಿಸಲು ನಿರ್ಧರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.