ADVERTISEMENT

ಪ್ರಜಾವಾಣಿ ವಿಶೇಷ: ‘ಪೊರಕೆ ಮಂಜಣ್ಣ’ನ ಪರಿಸರ ಕಾಳಜಿ

ನಿವೃತ್ತಿ ನಂತರ ಪ್ರತಿನಿತ್ಯ ಸ್ವಚ್ಛತಾ ಸೇವೆ lಉಳ್ಳಾಳ ರಸ್ತೆಯ ಕಸ ಗುಡಿಸುವುದರಲ್ಲೇ ಸಾರ್ಥಕತೆ ಕಂಡ ಜೀವ

ಜಿ.ಶಿವಕುಮಾರ
Published 17 ಏಪ್ರಿಲ್ 2021, 21:01 IST
Last Updated 17 ಏಪ್ರಿಲ್ 2021, 21:01 IST
ರಸ್ತೆಯಲ್ಲಿ ಕಸ ಗುಡಿಸುತ್ತಿರುವ ಮಂಜುನಾಥ್‌
ರಸ್ತೆಯಲ್ಲಿ ಕಸ ಗುಡಿಸುತ್ತಿರುವ ಮಂಜುನಾಥ್‌   

ಬೆಂಗಳೂರು: ಮುಂಜಾವಿನಲ್ಲಿ ಉಲ್ಲಾಳ ಉಪನಗರದ ವಿಶ್ವೇಶ್ವರಯ್ಯ ಬಡಾವಣೆಯ 60 ಅಡಿ ರಸ್ತೆಯಲ್ಲಿ ಹಾದು ಹೋಗುವವರಿಗೆ ಪೊರಕೆ ಹಿಡಿದು ರಸ್ತೆಯಲ್ಲಿ ಕಸ ಗುಡಿಸುವ ವ್ಯಕ್ತಿಯೊಬ್ಬರು ಕಣ್ಣಿಗೆ ಬೀಳುತ್ತಾರೆ. ಆ ಹಿರಿಯ ಜೀವದ ಹೆಸರು ಬಿ.ಎಸ್‌.ಮಂಜುನಾಥ್‌. 1.5 ಕಿ.ಮೀ. ಉದ್ದದ ಈ ರಸ್ತೆಯನ್ನು ನಿತ್ಯವೂ ಸ್ವಚ್ಛಗೊಳಿಸುವುದು ಅವರ ಕಾಯಕ. ಹೀಗಾಗಿಯೇ ಸುತ್ತಲಿನ ಜನ ಅವರನ್ನು ಪೊರಕೆ ಮಂಜಣ್ಣ ಎಂದುಪ್ರೀತಿಯಿಂದ ಕರೆಯುತ್ತಾರೆ.

ಮಂಜುನಾಥ್‌ ಅವರಿಗೆ ಈಗ 62ರ ಹರೆಯ. ಈಗಲೂ ಅವರ ಮನಸ್ಸು ಪರಿಸರ ಸಂರಕ್ಷಣೆಗಾಗಿ ತುಡಿಯುತ್ತಿದೆ. ತನ್ನ ಸುತ್ತಲಿನ ಪ್ರದೇಶ ಸ್ವಚ್ಛವಾಗಿರಬೇಕು, ನೆರೆಹೊರೆಯವರು ಸೇವಿಸುವ ಗಾಳಿ ಪರಿಶುದ್ಧವಾಗಿರಬೇಕು ಎಂಬುದು ಅವರ ಕಾಳಜಿ. ಈ ಕಾರಣದಿಂದಲೇ ಬೆಳಿಗ್ಗೆ ಎದ್ದ ಕೂಡಲೇ ಪೊರಕೆ ಹಿಡಿದು ರಸ್ತೆಗೆ ಇಳಿದುಬಿಡುತ್ತಾರೆ. ರಸ್ತೆಯ ಆಸುಪಾಸಿನಲ್ಲಿ ಬಿದ್ದಿರುವ ಕಸ ಕಡ್ಡಿಗಳನ್ನು ಹೆಕ್ಕುತ್ತಾರೆ. ಉದ್ಯಾನದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಕಿತ್ತೆಸೆಯುತ್ತಾರೆ. ಈ ಕಾರ್ಯಕ್ಕೆ ತಗಲುವ ₹4 ಸಾವಿರ ಮೊತ್ತವನ್ನು ತಮ್ಮ ಕಿಸೆಯಿಂದಲೇ ನೀಡುತ್ತಾರೆ.

ವಿಶ್ವೇಶ್ವರಯ್ಯ ಬಡಾವಣೆಯ ಮೂರನೇ ಹಂತದಲ್ಲಿ ವಾಸವಿರುವ ಮಂಜುನಾಥ್‌ ಅವರು ಬಾಪೂಜಿನಗರದಲ್ಲಿರುವ ಸಿದ್ಧಾರ್ಥ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡಿದ್ದರು. ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ‘ನಾನು ಬುದ್ಧ, ಬಸವ ಹಾಗೂ ವಿವೇಕಾನಂದರ ವಿಚಾರಧಾರೆಗಳನ್ನು ಓದಿಕೊಂಡು ಬೆಳೆದವನು. ವಿಶಿಷ್ಟವಾದದ್ದನ್ನೇನಾದರೂ ಮಾಡಬೇಕು, ಸಮಾಜ ಹಾಗೂ ಪ್ರಕೃತಿಗೆ ಏನಾದರೂ ಕೊಡುಗೆ ಕೊಡಬೇಕು ಎಂಬ ಆಸೆ ಎಳವೆಯಲ್ಲೇ ಚಿಗುರೊಡೆದಿತ್ತು. ನಮ್ಮ ಬಡಾವಣೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುತ್ತಿರಲಿಲ್ಲ. ರಸ್ತೆಗಳಲ್ಲಿ ರಾಶಿ ರಾಶಿ ಕಸ ಬಿದ್ದಿರುತ್ತಿತ್ತು. ಅದರಿಂದ ದುರ್ನಾತ ಬರುತ್ತಿತ್ತು. ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ನಿಂತಿರುತ್ತಿತ್ತು. ಈ ಸಂಬಂಧ ಅಧಿ
ಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ನಾನೇ ಸ್ವಚ್ಛತಾ ಕಾರ್ಯಕ್ಕೆ ಇಳಿದೆ’ ಎಂದು ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮೊದಲು ನಾನೊಬ್ಬನೇ ರಸ್ತೆ ಸ್ವಚ್ಛಗೊಳಿಸುತ್ತಿದ್ದೆ. ಈಗ ಅಂಗವಿಕಲರೊಬ್ಬರು ಜೊತೆಯಾಗಿದ್ದಾರೆ. ಭಾನುವಾರ ಮತ್ತೊಂದಿಷ್ಟು ಮಂದಿ ಕೈಜೋಡಿಸುತ್ತಾರೆ. ಬಿಬಿಎಂಪಿಯ ಇಬ್ಬರು ಪೌರ ಕಾರ್ಮಿಕರೂ ಇರುತ್ತಾರೆ. ಅಂದು ನಾವೆಲ್ಲರೂ ಉದ್ಯಾನ ಸ್ವಚ್ಛಗೊಳಿಸುತ್ತೇವೆ. ಪ್ರತಿ ತಿಂಗಳು ಪಿಂಚಣಿ ಬರುತ್ತದೆ. ಅದರಲ್ಲಿ ತಿಂಗಳಿಗೆ ₹4 ಸಾವಿರ ಮೊತ್ತವನ್ನು ಸ್ವಚ್ಛತಾ ಕಾರ್ಯಕ್ಕೆ ಮೀಸಲಿಡುತ್ತೇನೆ. ಮನೆಯಲ್ಲಿ ಆರಾಮವಾಗಿ ಇರುವಂತೆ ಕುಟುಂಬದವರು ಹೇಳುತ್ತಾರೆ. ಅದಕ್ಕೆ ಮನಸ್ಸು ಒಪ್ಪುವುದಿಲ್ಲ’ ಎಂದರು.

‘ಬಡಾವಣೆಯಲ್ಲಿರುವ ಖಾಲಿ ಜಾಗವೊಂದರಲ್ಲಿ ತರಕಾರಿ ಬೆಳೆಯುತ್ತೇನೆ. ಅದನ್ನು ನೆರೆಹೊರೆಯವರಿಗೆ ಉಚಿತವಾಗಿ ನೀಡುತ್ತೇನೆ. ಅಲ್ಲಿ ಗಿಡಗಳನ್ನೂ ನೆಟ್ಟು ಪೋಷಿಸುತ್ತಿದ್ದೇನೆ. ಕೆಲವರು ನನ್ನ ಕಾರ್ಯ ಮೆಚ್ಚಿ ಹಣಕಾಸಿನ ನೆರವು ನೀಡಿದ್ದಾರೆ. ಅದನ್ನು ಬಡಾವಣೆಯಲ್ಲಿ ಜಾಗೃತಿ ಫಲಕಗಳನ್ನು ಅಳವಡಿಸಲು ವಿನಿಯೋಗಿಸಿದ್ದೇನೆ. ಯಾವುದೇ ಪ್ರಶಸ್ತಿ ಅಥವಾ ಪುರಸ್ಕಾರದ ಆಸೆಯಿಂದ ಈ ಕೆಲಸ ಮಾಡುತ್ತಿಲ್ಲ’ ಎಂದು ಹೇಳಿದರು.

***

ನನ್ನ ಕೆಲಸದಿಂದ ಹಲವರು ಪ್ರೇರಣೆಗೊಂಡು ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕೆ ಅಧಿಕಾರಿಗಳೂ ಕೈಜೋಡಿಸಿದರೆ ನಮ್ಮ ಬಡಾವಣೆಯನ್ನು ಮಾದರಿ ಬಡಾವಣೆಯನ್ನಾಗಿ ರೂಪಿಸಬಹುದು.

–ಬಿ.ಎಸ್‌.ಮಂಜುನಾಥ್‌

***

ಮಂಜುನಾಥ್‌ ಅವರು ಮಾದರಿ ಕೆಲಸ ಮಾಡುತ್ತಿದ್ದಾರೆ. ಇದು ಇತರರಿಗೂ ಪ್ರೇರಣೆಯಾಗಬೇಕು. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು.

- ವಿ.ಎನ್‌.ವೀರನಾಗಪ್ಪ, ಸ್ಥಳೀಯರು

***

ಮಂಜುನಾಥ್‌ ಅವರು ಬಹಳ ಬದ್ಧತೆಯಿಂದ ಈ ಕೆಲಸ ಮಾಡುತ್ತಿದ್ದಾರೆ. ಅವರನ್ನು ನೋಡಿ ಇತರರೂ ಕಲಿಯಬೇಕು. ಬಡಾವಣೆಯ ಸ್ವಚ್ಛತೆ ನಮ್ಮೆಲ್ಲರ ಆದ್ಯತೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕು.

– ಎಚ್‌.ಕೆ.ಗೌಡಯ್ಯ, ಸ್ಥಳೀಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.