ADVERTISEMENT

Zika Virus: ಮುನ್ನೆಚ್ಚರಿಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 15:52 IST
Last Updated 2 ನವೆಂಬರ್ 2023, 15:52 IST
ಝೀಕಾ ವೈರಸ್ (ಪ್ರಾತಿನಿಧಿಕ ಚಿತ್ರ)
ಝೀಕಾ ವೈರಸ್ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಸೊಳ್ಳೆಗಳಲ್ಲಿ ಝೀಕಾ ವೈರಾಣು ದೃಢಪಟ್ಟಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿರುವ ಆರೋಗ್ಯ ಇಲಾಖೆ, ರೋಗ ಲಕ್ಷಣಗಳು ಕಾಣಿಸಿಕೊಂಡಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ ಸಂಪರ್ಕಿಸುವಂತೆ ತಿಳಿಸಿದೆ. 

ಈ ಬಗ್ಗೆ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ. ‘ರೋಗದ ಬಗ್ಗೆ ಅನಗತ್ಯ ಭಯ ಬೇಡ. ಜ್ವರ ಪೀಡಿತರಿಗೆ ಕಣ್ಣು ಕೆಂಪಾಗುವಿಕೆ, ಕೀಲುಗಳಲ್ಲಿ ನೋವು, ತಲೆನೋವು, ದದ್ದುಗಳು, ಸ್ನಾಯುಗಳಲ್ಲಿ ನೋವು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು. ಈ ಜ್ವರ 2 ದಿನಗಳಿಂದ 7 ದಿನಗಳವರೆಗೆ ಇರುತ್ತದೆ. ರೋಗಲಕ್ಷಣ ಅನುಸಾರ ಚಿಕಿತ್ಸೆ ನೀಡಲಾಗುತ್ತದೆ. ಗರ್ಭಿಣಿಯರು ಈ ವೈರಾಣುವಿನ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು’ ಎಂದು ಹೇಳಿದ್ದಾರೆ. 

‘ಈ ವೈರಾಣು ಈಡಿಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಮಳೆಗಾಲದಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಇನ್ನಷ್ಟು ದಿನ ಮುನ್ನೆಚ್ಚರಿಕೆ ವಹಿಸಬೇಕು. ಇದೇ ಸೊಳ್ಳೆಯು ಡೆಂಗಿ ಹಾಗೂ ಚಿಕೂನ್‌ಗುನ್ಯಾವನ್ನೂ ಹರಡುತ್ತದೆ. ಈಡಿಸ್ ಸೊಳ್ಳೆಯ ಸಂತಾನೋತ್ಪತ್ತಿ ತಡೆಗಟ್ಟಲು ಘನತ್ಯಾಜ್ಯವನ್ನು ಪರಿಣಾಮಕಾರಿಯಾಗಿ ವಿಲೇವಾರಿ ಮಾಡಬೇಕು’ ಎಂದು ತಿಳಿಸಿದ್ದಾರೆ. 

ADVERTISEMENT

‘ಸೋಂಕು ಶಂಕಿತ ವ್ಯಕ್ತಿಯ ಮಾದರಿ ಸಂಗ್ರಹಿಸಿ, ಬೆಂಗಳೂರಿನ ಎನ್‌ಐವಿ ಪ್ರಯೋಗಾಲಯಕ್ಕೆ ಕಳುಹಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.