ADVERTISEMENT

ಚಿಕಿತ್ಸೆ ನೀಡುವುದಕ್ಕಿಂತ ಹಣಕ್ಕೇ ಆದ್ಯತೆ: 10ಆಸ್ಪತ್ರೆ ಅಲೆದರೂ ಉಳಿಯಲಿಲ್ಲ ಮಗು!

ಕೆಲವು ಕಡೆ ತಪ್ಪು ಮಾಹಿತಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 21:10 IST
Last Updated 16 ಜುಲೈ 2020, 21:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಕೈಗಳಲ್ಲಿ ಒಂದು ತಿಂಗಳ ಮಗುವನ್ನು ಇಟ್ಟುಕೊಂಡು ಪೋಷಕರು ಹತ್ತು ಆಸ್ಪತ್ರೆಗಳನ್ನು ಅಲೆದರೂ ಚಿಕಿತ್ಸೆ ಸಿಕ್ಕಿಲ್ಲ. ಪರಿಣಾಮ, ಜಗತ್ತು ನೋಡಬೇಕಿದ್ದ ಕಂದಮ್ಮ ಒಂದೇ ತಿಂಗಳಿಗೆ ಇಹಲೋಕ ಯಾತ್ರೆ ಮುಗಿಸಿದೆ.

‘ನನ್ನ ಮಗಳು ಹಿಂದೂ ಅಥರ್ವ ನ್ಯುಮೋಕೋಕಿಲ್‌ ಕಾಯಿಲೆಯಿಂದ ಬಳಲುತ್ತಿದ್ದಳು. ಕಳೆದ ಭಾನುವಾರ ಬೆಳಿಗ್ಗೆ 10.30ಕ್ಕೆ ಮಂಜುನಾಥನಗರದ ಮಂಜುಶ್ರೀ ಕ್ಲಿನಿಕ್‌ಗೆ ಹೋದೆವು. ಅವರು, ಮಗುವಿಗೆ ಹೃದಯ ಸಮಸ್ಯೆಯಿದೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರು. ನಂತರ ಹತ್ತು ಆಸ್ಪತ್ರೆಗಳಿಗೆ ಅಲೆದಾಡಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದೆ ಸೋಮವಾರ ಸಂಜೆ ತೀರಿಕೊಂಡಳು’ ಎಂದು ರಾಜಾಜಿನಗರದ ವೆಂಕಟೇಶ್‌ ನಾಯ್ಡು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಯದೇವ ಆಸ್ಪತ್ರೆಯಲ್ಲಿ ಮಗುವನ್ನು ದಾಖಲು ಮಾಡಿಕೊಂಡರು. ಆದರೆ, ಮಗುವಿಗೆ ಹೃದಯ ಸಂಬಂಧಿ ತೊಂದರೆ ಇಲ್ಲ ಎಂದರು. ಮಂಜುಶ್ರೀ ಕ್ಲಿನಿಕ್‌ ವೈದ್ಯರು ನೀಡಿದ ತಪ್ಪು ಮಾಹಿತಿಯಿಂದ ಮಗುವನ್ನು ಕಳೆದುಕೊಳ್ಳಬೇಕಾಯಿತು’ ಎಂದು ಅವರು ತಿಳಿಸಿದರು.

ADVERTISEMENT

‘ಕಾಡ್೯ ರೋಡ್ ಆಸ್ಪತ್ರೆ, ಶೇಷಾದ್ರಿಪುರದ ಅಪೊಲೊ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಅಸ್ಪತ್ರೆ, ಮಂಜುನಾಥ ನಗರದ ಕಾಡೇ ಆಸ್ಪತ್ರೆ, ಗೊರಗುಂಟೆಪಾಳ್ಯದ ಪೀಪಲ್ಸ್ ಟ್ರೀ ಆಸ್ಪತ್ರೆ, ಸ್ಪರ್ಶ ಆಸ್ಪತ್ರೆ, ಯಶವಂತಪುರದ ರಾಮಯ್ಯ ಆಸ್ಪತ್ರೆಗೆ ಅಲೆದಾಡಿದೆ. ಇಂದಿರಾಗಾಂಧಿ ಆಸ್ಪತ್ರೆಯವರು ಒಳಗೇ ಬಿಟ್ಟುಕೊಳ್ಳಲಿಲ್ಲ. ಸ್ಪರ್ಶ ಆಸ್ಪತ್ರೆಯರು ಐದಾರು ತಾಸು ಕಾಯಿಸಿ ವಾಪಸ್‌ ಕಳಿಸಿದರು’ ಎಂದು ಅವರು ದೂರಿದರು.

‘ಕೊನೆಗೆ, ಮಾರತ್ತಹಳ್ಳಿಯ ರೇನ್‌ಬೋ ಮಕ್ಕಳ ಆಸ್ಪತ್ರೆಗೆ ದಾಖಲಿಸಿದೆವು. ಮಗುವಿನ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿದೆ. ಬೇಗ ಕರೆದುಕೊಂಡು ಬಂದಿದ್ದರೆ ಮಗುವನ್ನು ಉಳಿಸಿಕೊಳ್ಳಬಹುದಿತ್ತು ಎಂದರು’ ಎಂದು ಅವರು ಕಣ್ಣೀರು ಹಾಕಿದರು.

‘ಖಾಸಗಿ ಆಸ್ಪತ್ರೆಗಳ ವೈದ್ಯರು ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಮಗುವನ್ನು ಮುಟ್ಟುವುದಕ್ಕೂ ಮುನ್ನವೇ ಹಣ ಕಟ್ಟಿ ಬನ್ನಿ ಎಂದು ಹೇಳುತ್ತಿದ್ದರು’ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.