ADVERTISEMENT

ಪ್ರಿಫಿಕ್ಸ್ಡ್‌ ಆಟೊ ಬೂತ್‌ಗೆ ಚಾಲನೆ

ಎಂ.ಜಿ.ರಸ್ತೆ, ಕಬ್ಬನ್‌ ಪಾರ್ಕ್‌ ಮೆಟ್ರೋ ರೈಲು ನಿಲ್ದಾಣದ ಬಳಿ ಆರಂಭ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 21:45 IST
Last Updated 4 ಜನವರಿ 2023, 21:45 IST
ಎಂ.ಜಿ.ರಸ್ತೆಯಲ್ಲಿ ಬುಧವಾರ ಉದ್ಘಾಟನೆಯಾದ ಆಟೊ ಪ್ರಿಫಿಕ್ಸ್ಡ್ ಬೂತ್
ಎಂ.ಜಿ.ರಸ್ತೆಯಲ್ಲಿ ಬುಧವಾರ ಉದ್ಘಾಟನೆಯಾದ ಆಟೊ ಪ್ರಿಫಿಕ್ಸ್ಡ್ ಬೂತ್   

ಬೆಂಗಳೂರು: ಬಿಎಂಆರ್‌ಸಿಎಲ್ ಮತ್ತು
ಬೆಂಗಳೂರು ಸಂಚಾರ ಪೊಲೀಸರ ಸಹಯೋಗದಲ್ಲಿ ಎಂ.ಜಿ.ರಸ್ತೆ ಮತ್ತು ಕಬ್ಬನ್ ಪಾರ್ಕ್‌ ಮೆಟ್ರೊ ರೈಲು ನಿಲ್ದಾಣ
ಗಳ ಬಳಿ ದರ ಪೂರ್ವ ನಿಗದಿ (ಪ್ರಿಫಿಕ್ಸ್ಡ್) ಆಟೊ ಬೂತ್‌ಗಳು ಬುಧವಾರ ಕಾರ್ಯಾರಂಭಗೊಂಡವು.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ವಿಶೇಷ ಕಮಿಷನರ್ (ಸಂಚಾರ) ಎಂ.ಎ.ಸಲೀಂ ಉದ್ಘಾಟಿಸಿದರು.

ಬೈಯಪ್ಪನಹಳ್ಳಿ, ಬನಶಂಕರಿಯಲ್ಲಿ ತಲಾ ಒಂದು ಮತ್ತು ನಾಗಸಂದ್ರ ಮೆಟ್ರೊ ನಿಲ್ದಾಣದಲ್ಲಿ ಎರಡು ಬೂತ್‌ಗಳನ್ನು ತೆರೆಯಲಾಗುವುದು. ಮೆಟ್ರೊ ನಿಲ್ದಾಣಕ್ಕೆ ಬರುವ ಮತ್ತು ನಿಲ್ದಾಣದಿಂದ ಮನೆ ತಲುಪಲು ಈ ಪ್ರಿಫಿಕ್ಸ್ಡ್‌ ಆಟೊ ಬೂತ್‌ಗಳು ಅನುಕೂಲ ಆಗಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ADVERTISEMENT

ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 12.30ರವರೆಗೆ ಪೊಲೀಸ್ ಮತ್ತು ಬಿಎಂಆರ್‌ಸಿಎಲ್ ಸಿಬ್ಬಂದಿ ಜಂಟಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಆಟೊರಿಕ್ಷಾ ಪ್ರಯಾಣ ದರವು 2 ಕಿಲೋ ಮೀಟರ್‌ಗೆ ₹30 ಮತ್ತು ನಂತರದ ಪ್ರತಿ ಕಿಲೋ ಮೀಟರ್‌ಗೆ ₹15 ಇದೆ. ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಸಾಮಾನ್ಯ ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚಾಗಿರಲಿದೆ.

‘ತಲುಪಬೇಕಿರುವ ನಿಖರ ಸ್ಥಳವನ್ನು ಪ್ರಯಾಣಿಕರು ಈ ಕೌಂಟರ್‌ಗಳಲ್ಲಿ ತಿಳಿಸಬೇಕು. ಚಾಲಕ ಮತ್ತು ಪ್ರಯಾಣಿಕರ ದೂರವಾಣಿ ಸಂಖ್ಯೆ, ಆಟೊರಿಕ್ಷಾ ನೋಂದಣಿ ಸಂಖ್ಯೆಯನ್ನು ಇಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಪ್ರಯಾಣದ ಕೊನೆಯಲ್ಲಿ ಪಾವತಿಸಬೇಕಾದ ಮೊತ್ತವನ್ನೂ ಒಳಗೊಂಡ ಪ್ರಯಾಣದ ಚೀಟಿಯನ್ನು ಇಲ್ಲೇ ನೀಡಲಾಗುತ್ತದೆ. ಈ ಬೂತ್‌ಗಳಲ್ಲಿ ಪ್ರಯಾಣಿಕರು ಸೇವಾ ಶುಲ್ಕವಾಗಿ ₹2 ಪಾವತಿಸಬೇಕಾಗುತ್ತದೆ’ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿವರಿಸಿದ್ದಾರೆ.

ಎಂ.ಜಿ.ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕಬ್ಬಿನ ಜ್ಯೂಸ್ ಮಳಿಗೆಗೂ ಇದೇ ವೇಳೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.