ಬೆಂಗಳೂರು: ನಗರದಲ್ಲಿ ಆರು ಪಥಗಳಲ್ಲಿ, ‘ಟ್ವಿನ್ ಟ್ಯೂಬ್ ಟನಲ್’ ಮಾದರಿಯಲ್ಲಿ ಪೂರ್ವ–ಪಶ್ಚಿಮ ಕಾರಿಡಾರ್ ಸುರಂಗ ರಸ್ತೆ ನಿರ್ಮಾಣಕ್ಕೆ ಬಿಬಿಎಂಪಿ ಸಿದ್ಧತೆ ಆರಂಭಿಸಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಟೆಂಡರ್ ಆಹ್ವಾನಿಸಿದೆ.
ನಗರದಲ್ಲಿ ಸಂಚಾರ ಸುಗಮಗೊಳಿಸಲು ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ 18 ಕಿ.ಮೀ. ಉದ್ದದ ‘ಉತ್ತರ–ದಕ್ಷಿಣ ಕಾರಿಡಾರ್’ ಸುರಂಗ ರಸ್ತೆ ನಿರ್ಮಾಣಕ್ಕೆ ಫೆಬ್ರುವರಿಯಲ್ಲಿ ಟೆಂಡರ್ ಆಹ್ವಾನಿಸಲಾಗುತ್ತದೆ. ಇದರ ವೆಚ್ಚ ₹17,780 ಕೋಟಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ತಿಳಿಸಿದ್ದರು.
ಎರಡು ಹಂತಗಳಲ್ಲಿ ಸುರಂಗ ರಸ್ತೆ ನಿರ್ಮಾಣವಾಗಲಿದ್ದು, ಯೋಜನೆಗೆ ಬಿಬಿಎಂಪಿ, ಸರ್ಕಾರದಿಂದ ಅನುದಾನ ನೀಡಲಾಗುತ್ತದೆ. ಪವರ್ ಫೈನಾನ್ಸ್ ಕಾರ್ಪೊರೇಷನ್, ಹುಡ್ಕೊ ಸಾಲ ನೀಡಲು ಮುಂದೆ ಬಂದಿವೆ. ಯಾರು ಕಡಿಮೆ ಬಡ್ಡಿಗೆ ಹಣ ನೀಡುತ್ತಾರೋ ಅವರಿಗೆ ಹರಾಜಿನ ಮೂಲಕ ಅವಕಾಶ ನೀಡಲಾಗುತ್ತದೆ ಎಂದೂ ತಿಳಿಸಿದ್ದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡನೇ ಹಂತದಲ್ಲಿ ಯೋಜಿಸಲಾಗಿರುವ ಪೂರ್ವ–ಪಶ್ಚಿಮ ಕಾರಿಡಾರ್ ಸುರಂಗ ಮಾರ್ಗದಲ್ಲಿ ‘ಟ್ವಿನ್ ಟ್ಯೂಬ್ ಟನಲ್’ನಲ್ಲಿ (ಡಬಲ್ ಡೆಕ್) ಆರು ಪಥಗಳ 28 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಸುಮಾರು ₹25 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಕೆ.ಆರ್. ಪುರದಿಂದ ಜವಾಹರಲಾಲ್ ನೆಹರೂ ಉದ್ಯಾನ, ಸಿ.ವಿ. ರಾಮನ್ ಆಸ್ಪತ್ರೆ, ಇಂದಿರಾನಗರ, ದೊಮ್ಮಲೂರು, ಲಾಲ್‌ಬಾಗ್, ನ್ಯಾಷನಲ್ ಕಾಲೇಜ್, ಚಾಮರಾಜಪೇಟೆ, ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ಮೂಲಕ ನಾಯಂಡಹಳ್ಳಿ ಬಳಿಯ ನೈಸ್ ರಸ್ತೆ ಜಂಕ್ಷನ್‌ವರೆಗೆ ಪೂರ್ವ–ಪಶ್ಚಿಮ ಕಾರಿಡಾರ್ ಸುರಂಗ ಮಾರ್ಗ ನಿರ್ಮಿಸುವ ಕಾರ್ಯಾಸಾಧ್ಯತಾ ವರದಿ ನಕ್ಷೆಸಹಿತ ಬಿಬಿಎಂಪಿ ಬಳಿ ಇದೆ. ಇದೀಗ ಅದರಂತೆ ಡಿಪಿಆರ್ ತಯಾರಿಸಲು ಮುಂದಾಗಿದ್ದು, ಟೆಂಡರ್ ಅಂತಿಮಗೊಂಡ ನಂತರದ ಎಂಟು ವಾರದಲ್ಲಿ ಡಿಪಿಆರ್ ಸಿದ್ಧವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.