ADVERTISEMENT

ಸ್ವರಕ್ಷಣೆಗೆ ತಯಾರಿ ಅಗತ್ಯ: ಗೃಹ ಸಚಿವ ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 7 ಮೇ 2025, 16:08 IST
Last Updated 7 ಮೇ 2025, 16:08 IST
ನಗರದ ಎಸ್‌ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಆರ್‌ಪಿಎಫ್‌, ಆರ್‌ಪಿಎಸ್‌ಎಫ್‌ ಹಾಗೂ ಜಿಆರ್‌ಪಿ ಸಿಬ್ಬಂದಿ ಭದ್ರತೆ ಪರಿಶೀಲನೆ ನಡೆಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು  
ನಗರದ ಎಸ್‌ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಆರ್‌ಪಿಎಫ್‌, ಆರ್‌ಪಿಎಸ್‌ಎಫ್‌ ಹಾಗೂ ಜಿಆರ್‌ಪಿ ಸಿಬ್ಬಂದಿ ಭದ್ರತೆ ಪರಿಶೀಲನೆ ನಡೆಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು     

ಬೆಂಗಳೂರು: ಕೇಂದ್ರ ರಕ್ಷಣಾ ಇಲಾಖೆ ಹಾಗೂ ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಆವರಣದಲ್ಲಿ ನಾಗರಿಕರಿಗೆ ತುರ್ತು ಪರಿಸ್ಥಿತಿ ಎದುರಿಸುವ ಜಾಗೃತಿ ಕವಾಯತು ‘ಆಪರೇಷನ್ ಅಭ್ಯಾಸ್’  ಹಲಸೂರಿನಲ್ಲಿ ಬುಧವಾರ ಸಂಜೆ ನಡೆಯಿತು.

ರಕ್ಷಣಾ ಕಾರ್ಯಾಚರಣೆ ವೀಕ್ಷಿಸಿದ ಬಳಿಕ ಗೃಹ ಸಚಿವ ಪರಮೇಶ್ವರ ಅವರು ಮಾತನಾಡಿ, ‘ದೇಶದ ರಕ್ಷಣೆಯ ಪರಿಸ್ಥಿತಿ ಯಾವ ರೀತಿ ಇದೆ ಎನ್ನುವುದು ಎಲ್ಲರಿಗೂ ತಿಳಿದಿದೆ. 1971ರಲ್ಲಿ ಇಂತಹದ್ದೇ ಸಂದರ್ಭ ಎದುರಾಗಿತ್ತು. ಆಗ ದೇಶದಲ್ಲಿ ಆಗಿರುವ ಘಟನೆಗಳನ್ನು ನೆನಪಿಸಿಕೊಳ್ಳಬಹುದು. ಅಂತಹದ್ದೇ ಸಂದರ್ಭ ನಮಗೆ ಈಗ ಬಂದಿದೆ. ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಘಟನೆ ಪ್ರತಿಯೊಬ್ಬ ಭಾರತೀಯನಿಗೆ ನೋವನ್ನು ಉಂಟು ಮಾಡಿದೆ. 26 ಜನರ ಮೇಲೆ ಏಕಾಏಕಿ ದಾಳಿ ನಡೆಸಿದರು. ಅಮಾಯಕ ಜನರು, ಮಕ್ಕಳ ಮೇಲೆ ಹತ್ಯೆ ಮಾಡಿರುವುದನ್ನು ಜ್ಞಾಪಿಸಿಕೊಂಡರೆ ನೋವಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಯುದ್ಧದ ಛಾಯೆ ಇಡೀ ಭಾರತದಲ್ಲಿ ಆವರಿಸಿದೆ. ಭಾರತ ಪಾಕಿಸ್ತಾನದ ಮೇಲೆ‌ ಯುದ್ಧಕ್ಕೆ ಹೋಗಬಹುದು ಅಥವಾ ಪಾಕಿಸ್ತಾನ ಭಾರತದ ಮೇಲೆ ಯುದ್ಧಕ್ಕೆ ಬರಬಹುದು ಎಂಬ ಛಾಯೆ ಮೂಡಿದೆ. ಇದಕ್ಕೆ ನಾವೆಲ್ಲ ತಯಾರಿ ಮಾಡಿಕೊಳ್ಳಬೇಕಿದೆ’ ಎಂದು ಹೇಳಿದರು.

ADVERTISEMENT

‘ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ನಾಗರಿಕರನ್ನು ಯಾವ ರೀತಿ ರಕ್ಷಣೆ ಮಾಡಬೇಕು. ಸಾರ್ವಜನಿಕರ ಜವಾಬ್ಧಾರಿಗಳೇನು, ತುರ್ತು ಸಂದರ್ಭದಲ್ಲಿ ಶಾಂತಿ ಪಾಲನೆ ಮಾಡುವುದು ಹೇಗೆ? ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದರಿಂದ ಹಿಡಿದು, ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಬೇಕು ಎಂಬುದನ್ನು ‘ಆಪರೇಷನ್ ಅಭ್ಯಾಸ್’ ಮೂಲಕ ಅರಿವು ಮೂಡಿಸುವ ಅಗತ್ಯ ಇದೆ’ ಎಂದರು.

ಸಂಸದ ಕೆ.ಸುಧಾಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ, ಗೃಹ ಇಲಾಖೆಯ ಕಾರ್ಯದರ್ಶಿ ಎಸ್.ರವಿ ಹಾಜರಿದ್ದರು.

ಬೆಂಗಳೂರಿನಲ್ಲಿ ಬುಧವಾರ ರಕ್ಷಣಾ ಸಿಬ್ಬಂದಿ ‘ಆಪರೇಷನ್‌ ಅಭ್ಯಾಸ’ ವೇಳೆ ಅಣಕು ಕಾರ್ಯಾಚರಣೆ ನಡೆಸಿದರು – ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನಲ್ಲಿ ಬುಧವಾರ ನಡೆದ ‘ಆಪರೇಷನ್‌ ಅಭ್ಯಾಸ’ ವೇಳೆ ಮೊಳಗಿದ ಸೈರನ್‌ಗೆ ಕಿವಿ ಮುಚ್ಚಿಕೊಂಡು ಪುಟಾಣಿಗಳು   – ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಏರಿಯಲ್ ಲ್ಯಾಡರ್ ವಾಹನದ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು  – ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಹಲಸೂರು ಕೆರೆಯಲ್ಲಿ ಅಣಕು ಕಾರ್ಯಾಚರಣೆ ನಡೆಯಿತು  – ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ವಾಯುದಾಳಿ ನಡೆದರೆ ಸ್ವರಕ್ಷಣೆ ಮಾಡಿಕೊಳ್ಳುವುದು ಹೇಗೆಂದು ರಕ್ಷಣಾ ಸಿಬ್ಬಂದಿ ಪ್ರದರ್ಶನ ನೀಡಿದರು  – ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಸೈರನ್‌ 
ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಯಿತು 

Quote - ಯುದ್ಧದ ಸಂದರ್ಭದಲ್ಲಿ ಯಾವ ಊರಲ್ಲಿ ಏನಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಅಂತಹ ಸಂದರ್ಭ ಬರಬಾರದು ಜಿ.ಪರಮೇಶ್ವರ ಗೃಹ ಸಚಿವ

Cut-off box - ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿದ ಭದ್ರತೆ ನಗರದ ಹಲವು ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಮೆಜೆಸ್ಟಿಕ್‌ ಸಂಗೊಳ್ಳಿ ರಾಯಣ್ಣ ಯಶವಂತಪುರ ಕಂಟೋನ್ಮೆಂಟ್‌ ಕೆ.ಆರ್. ಪುರ ರೈಲ್ವೆ ನಿಲ್ದಾಣಗಳಲ್ಲಿ ಭದ್ರತೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಸ್‌ಎಂವಿಟಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬ್ಬಂದಿ ಬುಧವಾರ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.