ADVERTISEMENT

ಸಚಿವ ಆನಂದ ಸಿಂಗ್ ಖಾತೆ ಬದಲಾವಣೆಗೆ ಹೆಚ್ಚಿದ ಒತ್ತಡ

ಸಂದೇಹ ಇದ್ದರೆ ಖಾತೆ ಬದಲಿಸಿ: ಸಿಂಗ್‌

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 20:07 IST
Last Updated 14 ಫೆಬ್ರುವರಿ 2020, 20:07 IST
 ಆನಂದ ಸಿಂಗ್‌
ಆನಂದ ಸಿಂಗ್‌   

ಬೆಂಗಳೂರು: ಅರಣ್ಯ ಸಚಿವ ಆನಂದ ಸಿಂಗ್‌ ಖಾತೆಯನ್ನು ಬದಲಿಸಬೇಕು ಎಂಬ ಒತ್ತಡ ಹೆಚ್ಚಾಗಿದ್ದರೂ, ಅವರ ಖಾತೆಯನ್ನು ಮತ್ತೆ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಅರಣ್ಯ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ 15 ಪ್ರಕರಣಗಳು ಇರುವುದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಬದಲಿಸುವಂತೆ ಒತ್ತಡ ಹೆಚ್ಚಾಗಿದೆ.

ರಾಷ್ಟ್ರ ಮಟ್ಟದಲ್ಲೂ ಈ ವಿಷಯ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಈ ಬಗ್ಗೆ ಮಾಹಿತಿ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆನಂದಸಿಂಗ್‌, ‘ಮುಖ್ಯಮಂತ್ರಿಯವರು ನನ್ನ ಖಾತೆ ಬದಲಿಸುವುದಿದ್ದರೆ ಅದಕ್ಕೆ ನನ್ನ ತಕರಾರು ಇಲ್ಲ’ ಎಂದು ಹೇಳಿದ್ದಾರೆ.

ಭೇಟಿ ಸಂದರ್ಭದಲ್ಲಿ ಅವರು ಬಳ್ಳಾರಿ ಜಿಲ್ಲೆಯ ಉಸ್ತುವಾರಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ನಾನು ಅರಣ್ಯ ಖಾತೆ ಕೇಳಿರಲಿಲ್ಲ. ನೀವಾಗಿಯೇ ಅದನ್ನು ಕೊಟ್ಟಿದ್ದೀರಿ. ಯಾವ ಖಾತೆ ಕೊಟ್ಟರೂ ಮಾಡುತ್ತಿದ್ದೆ. ಈಗ ಮತ್ತೆ ಖಾತೆ ಬದಲಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದು ಮುಖ್ಯಮಂತ್ರಿಗೆ ಹೇಳಿದರೆನ್ನಲಾಗಿದೆ.

‘ಅರಣ್ಯ ನಾಶದ ಬಗ್ಗೆ ನನ್ನ ಮೇಲೆ ನೇರ ಆರೋಪಗಳಿಲ್ಲ. ಬೇರೆ ಯಾರದ್ದೋ ಪ್ರಕರಣಗಳಲ್ಲಿ ನನ್ನ ಹೆಸರನ್ನು ಸೇರಿಸಲಾಗಿದೆ. ಒಂದು ವೇಳೆ ಖಾತೆ ಬದಲಿಸುವುದಿದ್ದರೆ ಅದಕ್ಕೆ ನನ್ನ ತಕರಾರು ಇಲ್ಲ’ ಎಂದು ಅವರು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಹೇಳಿದರು.

‘ರಾಜಕೀಯ ಪಿತೂರಿಯೇ ಕಾರಣ’

‘ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲು ರಾಜಕೀಯ ಪಿತೂರಿಯೇ ಕಾರಣ. ನಾನು ಯಾವುದೇ ಗಣಿ ಕಂಪನಿಯ ಮಾಲೀಕನಲ್ಲ. ಗಣಿ ಕಂಪನಿಯ ಎಂಟು ಜನ ಮಾಲೀಕರಲ್ಲಿ ನನ್ನ ತಂದೆಯೂ ಒಬ್ಬರಿದ್ದರು. ತಂದೆಯವರು ಕಂಪನಿಯಿಂದ ನಿವೃತ್ತಿ ಹೊಂದಿದ ಬಳಿಕ, ನಾನು ಕಂಪನಿ ಸೇರಿದೆ. ಈ ಎಲ್ಲ ಮಾಹಿತಿಗಳೂ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ವಿವರಿಸಿದ್ದೇನೆ’ ಎಂದರು.

‘ನನ್ನ ಮೇಲೆ 15 ಪ್ರಕರಣಗಳಿರುವುದು ನಿಜ. ಈ ವಿಷಯದಲ್ಲಿ ರಾಜ್ಯದ ಜನರನ್ನು ಕತ್ತಲಿನಲ್ಲಿ ಇಡುವ ಪ್ರಶ್ನೆಯೇ ಇಲ್ಲ. ದಾಖಲಾಗಿರುವ ದೂರುಗಳನ್ನು ಪರಿಶೀಲಿಸಲಿ. ಒಂದು ವೇಳೆ ನನ್ನಿಂದ ಅರಣ್ಯ ಲೂಟಿ ಆಗುತ್ತದೆ ಎಂಬ ಸಂದೇಹ ಇದ್ದರೆ, ಖಾತೆ ಬದಲಾವಣೆ ಮಾಡಲಿ. ಅದಕ್ಕೂ ತಯಾರಿದ್ದೇನೆ’ ಎಂದೂ ಆನಂದ ಸಿಂಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.