ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಹಾಗೂ ಸಜಾ ಕೈದಿಗಳಿಗೆ ಮೊಬೈಲ್ ಪೂರೈಸುತ್ತಿದ್ದ ಆರೋಪದಡಿ ಮನಃಶಾಸ್ತ್ರಜ್ಞೆ ಸೇರಿ ಇಬ್ಬರನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನವ್ಯಶ್ರೀ (33) ಬಂಧಿತೆ.
ಕಾರಾಗೃಹದಲ್ಲಿದ್ದ ಕೈದಿಗಳ ಮನಃಪರಿವರ್ತನೆಗಾಗಿ ನವ್ಯಶ್ರೀ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಎರಡು ದಿನಗಳ ಹಿಂದೆ ಜೈಲಿನ ಬ್ಯಾರಕ್‌ವೊಂದರ ಒಳಕ್ಕೆ ಹೋಗುತ್ತಿದ್ದರು. ಪರಿಶೀಲನೆ ವೇಳೆ ಮೊಬೈಲ್ ಕೊಂಡೊಯ್ಯುತ್ತಿರುವುದು ಪತ್ತೆ ಆಯಿತು. ಅವರನ್ನು ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರ ವಶಕ್ಕೆ ನೀಡಲಾಯಿತು ಎಂದು ಪೊಲೀಸರು ಹೇಳಿದರು.
‘ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ತನಗೆ ಮತ್ತೊಬ್ಬ ವ್ಯಕ್ತಿ ಮೊಬೈಲ್ ತಂದು ಕೊಡುತ್ತಿದ್ದ. ಆ ಮೊಬೈಲ್ ಅನ್ನು ಕೈದಿಗಳಿಗೆ ನೀಡುತ್ತಿದ್ದೆ ಎಂಬುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ನವ್ಯಶ್ರೀಗೆ ಮೊಬೈಲ್ ತಂದು ಕೊಡುತ್ತಿದ್ದ ವ್ಯಕ್ತಿಯನ್ನೂ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ಜೈಲಿನ ಅಧೀಕ್ಷಕ ನೀಡಿದ ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.