ADVERTISEMENT

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಪಾರ್ಟಿ: ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 23:50 IST
Last Updated 12 ನವೆಂಬರ್ 2025, 23:50 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ 
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ    

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳು ಮದ್ಯದ ಪಾರ್ಟಿ ನಡೆಸಿಕೊಂಡು ನೃತ್ಯ ಮಾಡಿದ್ದ ಪ್ರಕರಣದ ತನಿಖೆಯನ್ನು ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರ ನೇತೃತ್ವದ ಉನ್ನತಮಟ್ಟದ ಸಮಿತಿ ಆರಂಭಿಸಿದ್ದು, ಪ್ರಾಥಮಿಕ ಮಾಹಿತಿ ಕಲೆಹಾಕಿದೆ. 

ಈ ಸಮಿತಿಯಲ್ಲಿ ಐಜಿಪಿ ಸಂದೀಪ್ ಪಾಟೀಲ, ಎಸ್‌ಪಿಗಳಾದ ಅಮರನಾಥ್ ರೆಡ್ಡಿ, ರಿಷ್ಯಂತ್ ಅವರೂ ಸದಸ್ಯರಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಜೈಲರ್ ಡಿ.ಗೋಪಿನಾಥ್‌ ಅವರು ನೀಡಿದ ದೂರಿನ ಮೇರೆಗೆ ಕೈದಿಗಳಾದ ಕಾರ್ತಿಕ್‌ ಅಲಿಯಾಸ್ ಚಿಟ್ಟೆ, ಧನಂಜಯ್‌ ಅಲಿಯಾಸ್ ರೇಣುಕಾಪ್ರಸಾದ್, ಮಂಜುನಾಥ್‌ ಅಲಿಯಾಸ್‌ ಕೋಳಿ ಮಂಜ ಹಾಗೂ ಬಿ.ಚರಣ್‌ರಾವ್‌ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಾಲ್ವರನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಅಲ್ಲದೇ ಅಮಾನತುಗೊಂಡಿರುವ ಅಧಿಕಾರಿಗಳಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಳ್ಳಲು ಸಿದ್ಧತೆ ನಡೆದಿದೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

ADVERTISEMENT

ದೃಶ್ಯಾವಳಿ ಪರಿಶೀಲನೆ: ‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ ಜೈಲಿನ 8ನೇ ಬ್ಯಾರಕ್‌ನ ಏಳನೇ ಕೊಠಡಿಯಲ್ಲಿ ಚಿತ್ರೀಕರಣಗೊಂಡಿರುವುದು ಎಂಬುದು ಗೊತ್ತಾಗಿದೆ. ನಿಷೇಧಿತ ವಸ್ತುಗಳನ್ನು ಜೈಲಿನ ಒಳಗೆ ತಂದಿರುವುದು ಪತ್ತೆಯಾಗಿದೆ. ನಿಷೇಧಿತ ವಸ್ತುಗಳನ್ನು ಯಾರು ಪೂರೈಸಿದ್ದರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಜೈಲಿನ ಪ್ರವೇಶ ದ್ವಾರ ಹಾಗೂ ಬ್ಯಾರಕ್‌ ಎದುರು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಆ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಅತ್ಯಾಚಾರ, ಸರಣಿ ಕೊಲೆಯ ಪಾತಕಿ ಉಮೇಶ್ ರೆಡ್ಡಿ, ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಭಯೋತ್ಪಾದಕ ಸಂಘಟನೆಯ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ, ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದ ಆರೋಪಿ ತರುಣ್ ರಾಜ್‌ ತಾವಿರುವ ಬ್ಯಾರಕ್‌ನಲ್ಲಿ ಮೊಬೈಲ್‌ ಹಿಡಿದು ಮಾತನಾಡುತ್ತಿರುವ, ಟಿ.ವಿ ವೀಕ್ಷಣೆ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

ಅದರ ಬೆನ್ನಲ್ಲೇ, ಮಾಂಸ, ಮದ್ಯ ಸೇವಿಸಿ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳು ನೃತ್ಯ ಮಾಡುತ್ತಿರುವ ವಿಡಿಯೊವೊಂದು ಜಾಲತಾಣದಲ್ಲಿ ಹರಿದಾಡಿತ್ತು. ಉಮೇಶ್‌ ರೆಡ್ಡಿ, ಶಾಹೀದ್‌ ಹಾಗೂ ತರುಣ್‌ನನ್ನು ಕಾರಾಗೃಹದ ಅಧಿಕಾರಿಗಳು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ವಿಡಿಯೊ ಆಧರಿಸಿ ಕೃತ್ಯ ನಡೆದ ಸ್ಥಳವನ್ನೂ ಪರಿಶೀಲನೆ ನಡೆಸಿದ್ದಾರೆ. ಈ ವರದಿಯನ್ನು ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸುವ ಉದ್ದೇಶದಿಂದಲೇ ಕೆಲವರು ಸಂಚು ರೂಪಿಸಿದ್ದರು ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಸೇಡು ತೀರಿಸಿಕೊಳ್ಳಲು ಸಂಚು?
‘ಜೈಲಿನಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡುವೆ ಪ್ರತ್ಯೇಕ ಗುಂಪುಗಳಿವೆ. ಒಂದು ಗುಂಪಿನ ಅಧಿಕಾರಿಗಳಿಗೆ ಕೆಟ್ಟ ಹೆಸರು ತರಬೇಕೆಂದು, ಇನ್ನೊಂದು ಗುಂಪು ಕೈದಿಗಳಿಗೆ ಮೊಬೈಲ್‌ ನೀಡಿ ಆ ದೃಶ್ಯವನ್ನು ಚಿತ್ರೀಕರಿಸಿಕೊಂಡಿದೆ. ಸೌಲಭ್ಯ ನೀಡಿದ ಜೈಲು ಅಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಕೆಲವು ಕೈದಿಗಳು ವಿಡಿಯೊ ಚಿತ್ರೀಕರಿಸಿಕೊಂಡು ಹೊರಗಿರುವ ಆಪ್ತರಿಗೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಸಿದ್ದರು ಎಂಬುದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ. ‘ಉಮೇಶ್‌ ರೆಡ್ಡಿ ಮೊಬೈಲ್‌ನಲ್ಲಿ ಮಾತನಾಡಿರುವ ದೃಶ್ಯವು 2023ರಲ್ಲಿ ಚಿತ್ರೀಕರಣಗೊಂಡಿರುವುದು. ಬೆಳಗಾವಿ ಕೇಂದ್ರ ಕಾರಾಗೃಹದಿಂದ ಉಮೇಶ್‌ ರೆಡ್ಡಿಯನ್ನು ಪರಪ್ಪನ ಅಗ್ರಹಾರಕ್ಕೆ ಕರೆತಂದು ಜೈಲಿನ ಆಸ್ಪತ್ರೆ ವಿಭಾಗದಲ್ಲಿ ಇರಿಸಲಾಗಿತ್ತು. ಅದೇ ವಿಭಾಗದಲ್ಲಿ ರೌಡಿ ಶೀಟರ್‌ ವಡ್ಡ ನಾಗನಿದ್ದ. ಆತನೇ ಉಮೇಶ್‌ ರೆಡ್ಡಿಗೆ ಮೊಬೈಲ್‌ ನೀಡಿ ಮಾತನಾಡುವಂತೆ ಹೇಳಿ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದ. ಈ ವಿಚಾರವನ್ನು ಉಮೇಶ್ ರೆಡ್ಡಿ ಕಾರಾಗೃಹದ ಅಧಿಕಾರಿಗಳಿಗೆ ತಿಳಿಸಿದ್ದಾನೆ’ ಎಂದು ಗೊತ್ತಾಗಿದೆ.

ನ್ಯಾಯಾಲಯದ ಅನುಮತಿ

ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಕೈದಿಗಳ ವಿಚಾರಣೆಗೆ ನ್ಯಾಯಾಲಯ ಅನುಮತಿ ನೀಡಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.